ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕ್ಷೇತ್ರ ಅಧ್ಯಯನ ಸಲುವಾಗಿ ಮಂಗಳೂರಿಗೆ ಆಗಮಿಸಿದ ತಮಿಳುನಾಡಿನ ಲೇಖಕರ ತಂಡದೊಂದಿಗೆ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ನಗರದ ತುಳು ಭವನದಲ್ಲಿ ನಡೆಯಿತು. ತುಳು ಅಕಾಡೆಮಿ, ಬ್ಯಾರಿ ಅಕಾಡೆಮಿ ಹಾಗೂ ಕೊಂಕಣಿ ಅಕಾಡೆಮಿ ಸಹಯೋಗದಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಿತು.ತಮಿಳುನಾಡಿನ ಎಂಟು ಮಂದಿ ಲೇಖಕರು ಹಾಗೂ ಅಧ್ಯಯನಗಾರರ ತಂಡವು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗೆ ಆಗಮಿಸಿದ ಸಂದರ್ಭ ಕರಾವಳಿಯ ಭಾಷೆ, ಸಂಸ್ಕೃತಿ ಬಗ್ಗೆ ತುಳು, ಕೊಂಕಣಿ, ಬ್ಯಾರಿ ಭಾಷೆಯ ತಜ್ಞರು ಹಾಗೂ ಸಾಹಿತಿಗಳು ವಿಚಾರ ವಿನಿಮಯ ಹಾಗೂ ಕವಿತೆಗಳ ಪ್ರಸ್ತುತಿ ಮೂಲಕ ಸಂವಾದ ನಡೆಸಿದರು.
ತುಳುನಾಡು ಹಾಗೂ ತಮಿಳುನಾಡಿನ ಪ್ರಾಚೀನ ಸಂಬಂಧ ಸಂಪರ್ಕಗಳ ಸಾಹಿತ್ಯಿಕ ಉಲ್ಲೇಖಗಳ ಬಗ್ಗೆ ಜಾನಪದ ತಜ್ಞ ಪ್ರೊ.ಎಸ್.ಎ. ಕೃಷ್ಣಯ್ಯ ವಿವರ ನೀಡಿದರು. ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಹಿರಿಯ ಕೊಂಕಣಿ ಲೇಖಕಿ ಮಂಗಳಾ ಭಟ್ ಮಾಹಿತಿ ವಿನಿಮಯ ನಡೆಸಿದರು. ಬ್ಯಾರಿ ಭಾಷೆಯ ಬಗ್ಗೆ ಹಿರಿಯ ಸಾಹಿತಿ ಶಂಶುದ್ದೀನ್ ಮಡಿಕೇರಿ ವಿವರ ನೀಡಿದರು.ಹಿರಿಯ ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ಬ್ಯಾರಿ ಹಾಗೂ ತುಳು ಭಾಷೆಯ ಕವಿತೆಯನ್ನು ವಾಚಿಸಿದರು. ಮೇಘ ಪೈ ಅವರು ಕೊಂಕಣಿ ಭಾಷೆಯ ಹಾಡನ್ನು ಪ್ರಸ್ತುತಪಡಿಸಿದರು. ರಮೇಶ್ ಮಂಚಕಲ್ ಅವರು ಕೊರಗ ಭಾಷೆಯ ಹಾಡನ್ನು ಪ್ರಸ್ತುತಪಡಿಸಿದರು. ತಮಿಳು ಲೇಖಕ ಸಲಾಯಿ ಬಶೀರ್ ನೇತೃತ್ವದಲ್ಲಿ ಆಗಮಿಸಿದ ಎಂಟು ಮಂದಿಯ ಈ ತಂಡದಲ್ಲಿ ಇತಿಹಾಸ ಶಿಕ್ಷಕರು, ಭಾಷಾ ಅಧ್ಯಯನಗಾರರು, ಸಾಹಿತ್ಯ ಆಸಕ್ತರು, ಸಾವಯವ ಕೃಷಿ, ಐ.ಟಿ. ಕ್ಷೇತ್ರದ, ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯ, ಸಂಸ್ಕೃತಿ ಅಧ್ಯಯನಾಸಕ್ತರು ಇದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸಿದ್ದರು. ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಸ್ವಾಗತಿಸಿದರು. ಕೊಂಕಣಿ ಅಕಾಡೆಮಿ ಸದಸ್ಯ ಸಮರ್ಥ್ ಭಟ್ ವಂದಿಸಿದರು.