ಸಾರಾಂಶ
ಮೌನೇಶ ವಿಶ್ವಕರ್ಮ
ಕನ್ನಡಪ್ರಭ ವಾರ್ತೆ ಬಂಟ್ವಾಳಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದು, ಕರ್ನಾಟಕದಿಂದ ಬಂದ ಭಕ್ತ ಸಮೂಹಕ್ಕೆ ಕನ್ನಡಿಗ ನಾಗಸಾಧು ತಪೋನಿಧಿ ಬಾಬಾ ವಿಠಲ್ ಗಿರಿ ಮಹಾರಾಜ್ ಆಕರ್ಷಣೆಯಾಗಿದ್ದಾರೆ. ವಿಶೇಷವಾಗಿ ಕರಾವಳಿಯಿಂದ ತೆರಳಿರುವ ಭಕ್ತರು ವಿಠಲ್ ಗಿರಿ ಮಹಾರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆಯುತ್ತಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನ 46ರ ಹರೆಯದ ವಿಠಲ ಪೂಜಾರಿ ಹರಿದ್ವಾರ ಕುಂಭಮೇಳದಲ್ಲಿ ತಪೋನಿಧಿ ಪಂಚಾಯಿತಿ ಆನಂದ್ ಅಖಾಡದ ಪರಮಹಂಸ ಬಾಬಾ ಶ್ರೀ ಬನ್ಖಂಡಿ ಮಹಾರಾಜ್ ಜೀ ಅವರ ಶಿಷ್ಯರಾಗಿ ನಾಲ್ಕು ವರ್ಷಗಳ ಹಿಂದೆ ದೀಕ್ಷೆ ಪಡೆದಿದ್ದಾರೆ. ಬಳಿಕ ತಪೋನಿಧಿ ಬಾಬಾ ವಿಠಲ್ ಗಿರಿ ಮಹಾರಾಜ್ ಜೀ ಎಂದು ಆಧ್ಯಾತ್ಮದ ಹೆಸರಿನ ಮೂಲಕ ಖ್ಯಾತಿ ಗಳಿಸಿದ್ದಾರೆ.ಈ ಹಿಂದೆ ಆರೆಸ್ಸೆಸ್ ಸ್ವಯಂಸೇವಕನಾಗಿದ್ದು, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೈಸೂರಿನಲ್ಲಿ ಧರ್ಮ ಜಾಗರಣದ ಪ್ರಚಾರಕನಾಗಿಯೂ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, 16 ವರ್ಷಗಳ ಹಿಂದೆಯೇ ಕೆಲಸ ತ್ಯಜಿಸಿ, ಆಧ್ಯಾತ್ಮದತ್ತ ವಾಲಿ, ಪ್ರಸ್ತುತ ಉತ್ತರಭಾರತದಲ್ಲಿ ನೆಲೆಸಿ ಆಧ್ಯಾತ್ಮದ ಧ್ಯಾನದಲ್ಲಿ ತೊಡಗಿದ್ದಾರೆ. ಕಳೆದ ಪೌಷ ಪೂರ್ಣಿಮೆಯಿಂದ , ಬುಧವಾರದ ಮಾಘ ಪೂರ್ಣಿಮೆಯ ವರೆಗೆ ಸಮುದ್ರ ಕಿನಾರೆಯಲ್ಲಿ ಯೋಗ, ತಪಸ್ಸು, ಆಧ್ಯಾತ್ಮಪ್ರಾರ್ಥನೆಯಲ್ಲಿ ತೊಡಗಿದ್ದು ‘ಕಲ್ಪವಾಸ’ವನ್ನು ಪೂರೈಸಿದ್ದಾರೆ. ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್ ರಾಜ್‌ನಿಂದ ‘ಕನ್ನಡಪ್ರಭ’ದ ಜೊತೆ ಮಾತನಾಡಿದ ಅವರು ಶುಕ್ರವಾರ ಹರಿಯಾಣದತ್ತ ತೆರಳುವುದಾಗಿ ತಿಳಿಸಿದ್ದಾರೆ.
ಇಡೀ ಜಗತ್ತೇ ಸನಾತನ ಧರ್ಮದ ಕಡೆ ಮುಖಮಾಡಿದೆ ಎನ್ನುವುದಕ್ಕೆ ಮಹಾ ಕುಂಭಮೇಳವೇ ಜಗತ್ತಿನ ನಾನಾಭಾಗದಿಂದ ಹರಿದು ಬರುತ್ತಿರುವ ಭಕ್ತಸಮೂಹವೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.ಸನಾತನ ಹಿಂದೂ ಧರ್ಮದ ಶಕ್ತಿ ಏನೆಂಬುದನ್ನು ಇಡೀ ಅರಿತುಕೊಂಡಿದ್ದು ಜಾಗೃತ ಜನಸಮೂಹ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ, ಸನಾತನ ಧರ್ಮದ ಅಹಿಂಸೆ, ಹಿರಿಮೆ, ನಂಬಿಕೆ ಎಲ್ಲಾ ಧರ್ಮೀಯರನ್ನೂ ಆಕರ್ಷಿಸುತ್ತಿದೆ ಎನ್ನುತ್ತಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ‘ಬಟೇಂಗೆ ತೋ ಕಟೇಂಗೆ’ ಎನ್ನುವ ಕರೆಗೆ ಇಡೀ ಹಿಂದೂ ಸಮಾಜ ಜಾಗೃತವಾಗಿದೆ ಎಂದರು.ಅಚ್ಚುಕಟ್ಟಿಗೆ ಪ್ರಶಂಸೆ:
ಮಹಾಕುಂಭಮೇಳದ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇಷ್ಟೊಂದು ಅಚ್ಚುಕಟ್ಟಿನ ವ್ಯವಸ್ಥೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರದೃಷ್ಟಿಯ ಚಿಂತನೆಯಿಂದ ಸಾಧ್ಯವಾಗಿದೆ. ಹೀಗಾಗಿಯೇ ಕುಂಭಮೇಳಕ್ಕೆ ಬಂದ ಭಕ್ತಸಮೂಹಕ್ಕೆ ಯಾವ ಮೂಲ ಸೌಕರ್ಯಗಳಿಗೂ ಕೊರತೆಯಾಗಿಲ್ಲ . ಕರ್ನಾಟಕದಿಂದ ವಿಶೇಷವಾಗಿ ತುಳುನಾಡಿನಿಂದ ಬಂದ ನೂರಾರು ಮಂದಿ ಊರಿನವರು ಎಂಬ ಅಭಿಮಾನದಿಂದ ನನ್ನನ್ನು ಕಂಡು, ಮಾತನಾಡಿಸಿದ್ದಾರೆ ಎಂದು ಖುಷಿ ಹಂಚಿಕೊಂಡರು.