ಸಾರಾಂಶ
ಕರಾವಳಿ ಭಾಗದವರು ಆಯೋಜಿಸಿರುವ ಕರಾವಳಿ ಉತ್ಸವಕ್ಕೆ ಹುಬ್ಬಳ್ಳಿಯವರು ಸಾಕಷ್ಟು ಸಹಕಾರ, ಪ್ರೋತ್ಸಾಹ ಬೆಂಬಲ ನೀಡಿದ್ದಾರೆ.
ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದವರು ಎಲ್ಲ ಸಮುದಾಯದವರಿಂದ ಪ್ರೀತಿ, ವಿಶ್ವಾಸ ಪಡೆಯುವ ಸ್ವಭಾವದವರು ಎಂದು ಹು- ಧಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಇಲ್ಲಿನ ಕಲ್ಲೂರ ಲೇಔಟ್‌ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಆಯೋಜಿಸಿದ್ದ ಕರಾವಳಿ ಉತ್ಸವ ಅಂಗವಾಗಿ ಶುಕ್ರವಾರ ಎರಡನೇ ದಿನ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರಾವಳಿ ಭಾಗದವರು ಆಯೋಜಿಸಿರುವ ಕರಾವಳಿ ಉತ್ಸವಕ್ಕೆ ಹುಬ್ಬಳ್ಳಿಯವರು ಸಾಕಷ್ಟು ಸಹಕಾರ, ಪ್ರೋತ್ಸಾಹ ಬೆಂಬಲ ನೀಡಿದ್ದಾರೆ. ಕರಾವಳಿಯವರು ನಮ್ಮವರೆಂದು ಹುಬ್ಬಳ್ಳಿಯವರು ಸ್ವೀಕರಿಸಿದ್ದಾರೆ. ಅವರನ್ನು ಸಹ ನಾವು ಅದೇ ಭಾವದಿಂದ ನೋಡುತ್ತಿದ್ದೇವೆ ಎಂದು ಹೇಳಿದರು.
ಕರಾವಳಿ ಭಾಗದವರು ಎಲ್ಲೇ ಹೋದರೂ ಅದು ನಮ್ಮದೆ ಊರು, ಮನೆ, ಸಂಸ್ಕಾರ, ಜನರೆಂದು ಭಾವಿಸಿ ಅವರನ್ನು ಪ್ರೀತಿಸುತ್ತೇವೆ. ಅವರಿಂದಲೂ ಅದೇ ರೀತಿಯ ಪ್ರೀತಿ, ವಿಶ್ವಾಸ ಪಡೆಯುತ್ತಿದ್ದಾರೆ ಎಂದರು.ಕರಾವಳಿ ಉತ್ಸವ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲು ಸರ್ಕಾರದಿಂದ ಸಿಗಬಹುದಾದ ಫಂಡ್ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ ಭರವಸೆ ನೀಡಿದ್ದಾರೆ. ಅದಕ್ಕೆ ನಾವು ಚಿರಋಣಿ ಆಗಿದ್ದೇವೆ ಎಂದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯದರ್ಶಿ ಶೈಲಜಾ ಬಗರೆ, ಶಶಿಮಂಗಲಾ ಐತಾಳ ಇದ್ದರು. ವಿಜೇತಾ ಶೆಟ್ಟಿ ನಿರೂಪಿಸಿದರು.ನಂತರ ಆಳ್ವಾಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ನರ ಶಾರ್ದೂಲ ಯಕ್ಷಗಾನ ಪ್ರಸಂಗ ನಡೆಯಿತು.