ಉಡುಪಿ ಜಿಲ್ಲೆಯಲ್ಲಿ ಸಮುದ್ರ ತೀರದಲ್ಲಿರುವ ದ್ವೀಪಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ ಕರಾವಳಿ ಭಾಗಕ್ಕಷ್ಟೇ ಅಲ್ಲದೆ ರಾಜ್ಯದ ಮತ್ತು ದೇಶದ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಲ್ಪೆ: ಉಡುಪಿ ಜಿಲ್ಲೆಯಲ್ಲಿ ಸಮುದ್ರ ತೀರದಲ್ಲಿರುವ ದ್ವೀಪಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ ಕರಾವಳಿ ಭಾಗಕ್ಕಷ್ಟೇ ಅಲ್ಲದೆ ರಾಜ್ಯದ ಮತ್ತು ದೇಶದ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೋಮವಾರ ಸೈಂಟ್ ಮೇರಿಸ್ ದ್ವೀಪದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸೈಂಟ್ ಮೇರಿಸ್ ದ್ವೀಪವೂ ಸೇರಿದಂತೆ ರಾಜ್ಯದಲ್ಲಿರುವ 116 ದ್ವೀಪಗಳೂ ನಿರ್ಲಕ್ಷ್ಯಕ್ಕೊಳಗಾಗಿವೆ. ಇಂತಹ ಅತ್ಯದ್ಭುತ ಸಂಪನ್ಮೂಲಗಳಿದ್ದರೂ ನಾವು ಪ್ರವಾಸೋದ್ಯಮದ ದೃಷ್ಟಿಯಿಂದ ಅವುಗಳನ್ನು ಬಳಸಿಕೊಳ್ಳಲು ವಿಫಲರಾಗಿದ್ದೇವೆ. ಇತ್ತೀಚೆಗೆ ಮಂಗಳೂರಿನಲ್ಲಿ ಕರಾವಳಿ ಪ್ರವಾಸೋದ್ಯಮದ ಬಗ್ಗೆ ವಿಚಾರ ಸಂಕಿರಣವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸಿಎಂ, ಡಿಸಿಎಂ ಭಾಗವಹಿಸಿದ್ದು, ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿರುವ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲರ ಸಲಹೆ, ಮಾರ್ಗದರ್ಶನದೊಂದಿಗೆ ಮುಂದಿನ ದಿನಗಳಲ್ಲಿ ಈ ಭಾಗವನ್ನು ಅಭಿವೃದ್ದಿಪಡಿಸೊಣ ಎಂದು ಹೇಳಿದರು.
ಕರ್ನಾಟಕದ ಅತಿ ದೊಡ್ಡ ದ್ವೀಪ ಎನ್ನುವ ಹೆಮ್ಮೆಗೆ ಪಾತ್ರವಾಗಿರುವ ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣ ನೆರವೇರಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಇಲ್ಲಿಗೆ ಬೋಟಿನಲ್ಲಿ ಬರುವಾರ ಕರಾವಳಿ ಕಾವಲು ಪಡೆಯ 11 ಬೋಟುಗಳನ್ನು ಪರಿಶೀಲನೆ ಮಾಡುತ್ತಾ ಬಂದೆ. ಇದು ನನಗೆ ಬಹಳ ರೋಮಾಂಚಕಾರಿ ಅನುಭವವಾಗಿದೆ ಎಂದರು.ಇಲ್ಲಿ ಮೀನುಗಾರರು, ಕರಾವಿ ಕಾವಲು ಪಡೆಯ ಪೊಲೀಸರು, ಬೀಚ್ ಸ್ವಚ್ಛತೆಯ ಸ್ವಯಂ ಸೇವಕರು ನಿಜವಾದ ದೇಶಭಕ್ತರು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಗೂ ಗಮನ ನೀಡುವುದನ್ನು ಮರೆಯಬೇಡಿ ಎಂದು ಸಚಿವರು ಕಿವಿಮಾತು ಹೇಳಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಜಿಪಂ ಸಿಇಓ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.