ಕಡಲ ಗಡಿ ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್‌ ಪಾತ್ರ ಮಹತ್ತರ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌

| Published : Feb 24 2024, 02:31 AM IST

ಕಡಲ ಗಡಿ ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್‌ ಪಾತ್ರ ಮಹತ್ತರ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಎನ್‌ಎಂಪಿಎಯಲ್ಲಿ 48ನೇ ಭಾರತೀಯ ಕೋಸ್ಟ್‌ ಗಾರ್ಡ್‌ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತೀಯ ಕೋಸ್ಟ್‌ಗಾರ್ಡ್‌ ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿದ್ದು, ಕಡಲ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ ದೇಶದ ಸುಮಾರು 7,500 ಕಿಲೋ ಮೀಟರ್‌ ಕಡಲ ಗಡಿಗಳ ರಕ್ಷಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.

ಗುರುವಾರ ಸಂಜೆ ಎನ್‌ಎಂಪಿಎಯಲ್ಲಿ ಆಯೋಜಿಸಲಾದ 48ನೇ ಭಾರತೀಯ ಕೋಸ್ಟ್‌ ಗಾರ್ಡ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋಸ್ಟ್‌ಗಾರ್ಡ್‌ನ ಕರಾವಳಿ ಅಧಿಕಾರಿಗಳು, ಸೈನಿಕರು ಮತ್ತು ಅವರ ಕುಟುಂಬಗಳಿಗೆ ಭಾರತೀಯ ಕೋಸ್ಟ್‌ಗಾರ್ಡ್‌ ದಿನಾಚರಣೆ ಶುಭಾಶಯ ಕೋರಿದ ರಾಜ್ಯಪಾಲರು, ಕೋಸ್ಟ್‌ ಗಾರ್ಡ್‌ ಕಡಲ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಕಡಲ ನಿಯಮಗಳ ಅನುಪಾಲನೆ ಖಾತ್ರಿಪಡಿಸುವ ದೇಶದ ಸಶಸ್ತ್ರ ಪಡೆಯಾಗಿದೆ ಎಂದರು.

ಸಾಗರ ವ್ಯಾಪಾರ ಮತ್ತು ಸಾರಿಗೆ ಜಾಗತಿಕ ಆರ್ಥಿಕತೆಯ ಬೆನ್ನೆಲುಬು. ಕಳೆದ ಎರಡು ದಶಕಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಕಡಲ ವ್ಯಾಪಾರ ಮತ್ತು ವಾಣಿಜ್ಯದ ಪ್ರಾಮುಖ್ಯತೆಯನ್ನು ಶ್ರುತಪಡಿಸಿದೆ. ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯು ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಕಡಲ ಸಾರಿಗೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿ ಸಮುದ್ರ ಮಾಲಿನ್ಯ, ಕಡಲ ಭಯೋತ್ಪಾದನೆ, ಅಕ್ರಮ ಕಳ್ಳಸಾಗಣೆ ಸೇರಿದಂತೆ ಹಲವು ಸಮಸ್ಯೆಗಳು ಕಡಲ ವ್ಯಾಪಾರ ಮತ್ತು ಭದ್ರತೆಗೆ ಹೆಚ್ಚು ಸವಾಲಾಗಿದೆ. ಈ ನಿಟ್ಟಿನಲ್ಲಿ ಕೋಸ್ಟ್‌ ಗಾರ್ಡ್‌ನ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಕೋಸ್ಟ್‌ ಗಾರ್ಡ್‌ ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳೊಂದಿಗೆ ಜಂಟಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ. ಇದು ಅಂತಾರಾಷ್ಟ್ರೀಯ ಮಾತುಕತೆಗಳ ಸಂದರ್ಭದಲ್ಲಿ ಕೋಸ್ಟ್‌ ಗಾರ್ಡ್‌ ದೇಶದ ಹಿತಾಸಕ್ತಿಗಳನ್ನು ಖಾತ್ರಿಪಡಿಸಿದೆ ಮತ್ತು ದೇಶಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ ನೈಸರ್ಗಿಕ ವಿಕೋಪ ವೇಳೆ ಸಕಾಲಿಕ ಕಾರ್ಯಾಚರಣೆ ಮೂಲಕ ಗಮನಾರ್ಹ ಕೊಡುಗೆ ನೀಡಿದೆ. ಕರ್ನಾಟಕಕ್ಕೆ ಅಪ್ಪಳಿಸಿದ ತೌಕ್ತೇ, ಶಾಹೀನ್‌ನಂತಹ ಚಂಡಮಾರುತಗಳ ಸಮಯದಲ್ಲಿ ಜೀವ ಮತ್ತು ಆಸ್ತಿಯನ್ನು ಉಳಿಸಿದೆ. ಮೀನುಗಾರರ ಸುರಕ್ಷತೆಯ ಜೊತೆಗೆ ಸಮುದಾಯ ಸಂವಹನ ಕಾರ್ಯಕ್ರಮಗಳ ಮೂಲಕ ಮೀನುಗಾರರಿಗೆ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಕೋಸ್ಟ್‌ಗಾರ್ಡ್‌ ಮೂಡಿಸುತ್ತಿದೆ. ಭಾರತೀಯ ಕರಾವಳಿಯುದ್ದಕ್ಕೂ ಎಲೆಕ್ಟ್ರಾನಿಕ್‌ ಕಣ್ಗಾವಲು ಜಾಲಗಳನ್ನು ಸ್ಥಾಪಿಸುವಲ್ಲಿ ಭಾರತೀಯ ಕೋಸ್ಟ್‌ ಗಾರ್ಡ್‌ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ದಿಸೆಯಲ್ಲಿ ನಾಲ್ಕು ರಾಡಾರ್‌ ಕೇಂದ್ರಗಳು ಕರ್ನಾಟಕದ ಸುರತ್ಕಲ್‌, ಭಟ್ಕಳ, ಬೇಲಿಕೇರಿ ಮತ್ತು ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಕರ್ನಾಟಕ ಕೋಸ್ಟ್‌ ಗಾರ್ಡ್‌ ಕಮಾಂಡರ್‌ ಪ್ರವೀಣ್‌ ಕುಮಾರ್‌ ಮಿಶ್ರಾ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.