ತೆಂಗು ಅಭಿವೃದ್ದಿ ಮಂಡಳಿ ವತಿಯಿಂದ ನೀಡುತ್ತಿರುವ ಪುನಶ್ಚೇತನ ಕಾರ್ಯಕ್ರಮ ವಿಸ್ತರಣೆ ಹಾಗೂ ಕಾರ್ಮಿಕರಿಗೆ ನೀಡುವ ವಿಮಾ ಯೋಜನೆಗಳು ರೈತರಿಗೆ ವರದಾನ

ಕನ್ನಡ ಪ್ರಭ ವಾರ್ತೆ ಕುಣಿಗಲ್

ತೆಂಗಿನ ಬೆಲೆ ಉತ್ತಮಗೊಳ್ಳುತ್ತಿದ್ದು ಸರ್ಕಾರ ಬೆಂಬಲ ಬೆಲೆಗೆ ಆಸಕ್ತಿ ತೋರುತ್ತಿದೆ ಈ ಹಿನ್ನೆಲೆಯಲ್ಲಿ ತೆಂಗು ಅಭಿವೃದ್ದಿ ಮಂಡಳಿ ವತಿಯಿಂದ ನೀಡುತ್ತಿರುವ ಪುನಶ್ಚೇತನ ಕಾರ್ಯಕ್ರಮ ವಿಸ್ತರಣೆ ಹಾಗೂ ಕಾರ್ಮಿಕರಿಗೆ ನೀಡುವ ವಿಮಾ ಯೋಜನೆಗಳು ರೈತರಿಗೆ ವರದಾನವಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದು ತೆಂಗು ಅಭಿವೃದ್ದಿ ಮಂಡಳಿಯ ಡೆವಲಮೆಂಟ್ ಆಫೀಸರ್ ಡಾ.ಇಂದುಶ್ರೀ ಚೌಹಾಣ್ ತಿಳಿಸಿದ್ದಾರೆ . ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಕೊಕೊನಟ್ ಪ್ರೋಡ್ಯೂಸರ್ ಫೆಡರೇಷನ್ ಹಾಗೂ ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ಸಹಯೋಗದೊಂದಿಗೆ ರೈತರಿಗೆ ಪುನಶ್ಚೇತನ ಕಾರ್ಯಕ್ರಮದಡಿ ಹಲವಾರುರೈತರಿಗೆ ತೆಂಗಿನ ಇಲಾಖಾ ಸವಲತ್ತು ವಿತರಿಸಿ ಮಾತನಾಡಿದರು . ತುಮಕೂರು ಜಿಲ್ಲೆಉತ್ತಮ ತೆಂಗು ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದು ತೆಂಗು ಅಭಿವೃದ್ಧಿ ಮಂಡಳಿಯಿಂದ ಕುಣಿಗಲ್ ಸೇರಿದಂತೆ ವಿವಿಧ ಭಾಗಗಳಲ್ಲಿ ತೆಂಗಿನ ಮರಗಳಿಗೆ ವಿವಿಧ ರಾಸಾಯನಿಕ ಗೊಬ್ಬರ ಕೀಟನಾಶಕ , ಕೀಟನಿಯಂತ್ರಕ ಪರೋಪ ಜೀವಿಗಳನ್ನು ವಿತರಿಸಲಾಗಿದೆ. ಹೆಚ್ಚಾಗಿ ರೈತರು ತೆಂಗು ಬೆಳೆಯಲ್ಲಿ ಆಸಕ್ತಿ ತೋರುತ್ತಿದ್ದು ತೆಂಗು ವಿಸ್ತರಣಾ ಯೋಜನೆಯಡಿಯಲ್ಲಿ ತಮ್ಮ ಖಾಲಿ ತೋಟದಲ್ಲಿ ನೆಡುವ ಪ್ರತಿ ಸಸಿಗೆ ಸಬ್ಸಿಡಿ ರೂಪದಲ್ಲಿ ತೆಂಗು ಅಭಿವೃದ್ಧಿ ಮಂಡಳಿ 350ರು ನೀಡಲಿದೆ. ಎರಡು ವರ್ಷದ ಅಂತರದಲ್ಲಿ ಎರಡು ಕಂತಿನಲ್ಲಿ. ತೆಂಗು ಬೆಳೆಗಾರರಿಗೆ ಹಣ ಬರಲಿದೆ ಎಂದರು.

ರೈತರು ತಮ್ಮ ಜಮೀನುಗಳಲ್ಲಿ ತೆಂಗು ಗಿಡಗಳನ್ನು ನಾಟಿ ಮಾಡಿದಾಗ ಸರ್ಕಾರ ಪ್ರತಿ ಎಕ್ಟೇರ್ ಗೆ 56 ಸಾವಿರ ಆರ್ಥಿಕ ನೆರವು ನೀಡಲಿದ್ದು ರೈತರು ಬಳಸಿಕೊಳ್ಳಬೇಕು. ರೋಗಗಳ ನಿಯಂತ್ರಣಕ್ಕೆ ಹಾಗೂ ವಯಸ್ಸಾದ ಮರಗಳನ್ನು ತೆಗೆದು ಪುನಃ ನಾಟಿ ಮಾಡಲು 32 ಸಾವಿರ ಹಾಗೂ ಪುನಶ್ಚೇತನ ಕಾರ್ಯಕ್ರಮದಡಿ 2 ವರ್ಷದ ಅವಧಿಗೆ 17500 ಹಾಗೂ ಹೊಸ ತಳಿಗಳ ಮರು ನಾಟಿಗೆ 4500 ನೀಡಲಾಗುತ್ತಿದೆ ಎಂದರು. ತೆಂಗಿನ ಸಸಿ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಬೀಜ ಉತ್ಪಾದನಾ ಘಟಕಕ್ಕೆ ಪ್ರತಿ ಸಸಿಗೆ 20ರು. ಸಹಾಯ ಧನ 2 ಎಕ್ಟೇರ್ ಗಿಂತ ಮೇಲ್ಪಟ್ಟು ಉತ್ಪಾದನೆ ಮಾಡಲು ಹಾಗೂ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುವ ತೆಂಗು ಫಾರ್ಮ್ ಗಳಿಗೆ ಹಾಗೂ ರೈತರಿಗೆ ಸಹಾಯ ಧನ ನೀಡಲಾಗುತ್ತಿದೆ ಎಂದರು. ಕೇರಾ ಯೋಜನೆಯಿಂದ ರೈತರಿಗೆ ವಿಮಾ ವರದಾನವಾಗಿದೆ. ತೆಂಗಿನ ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿ ವಿಮಾ ಯೋಜನೆ ಯನ್ನು ಜಾರಿಗೆ ತಂದಿದ್ದು ತೆಂಗು ತೋಟದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅಪಘಾತಕ್ಕೆ ಗರಿಷ್ಠ 7 ಲಕ್ಷದ ವರೆಗೆ ವಿಮಾ ಯೋಜನೆ ಕುಟುಂಬಕ್ಕೆ ಸಿಗಲಿದೆ. ಅಂಗವೈಕಲ್ಯಕ್ಕೆ 3.5ಲಕ್ಷ ರು. ಪರಿಹಾರ ದೊರಯಲಿದೆ. . ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 2 ತಿಂಗಳ ವರೆಗೆ ಔಷಧ ಒಳಗಂಡಂತೆ 2 ಲಕ್ಷದ ತನಕ ಆಸ್ಪತ್ರೆಯ ವೆಚ್ಚ ಪಾವತಿಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಜೊತೆಗೆ ಇದ್ದು ನೋಡಿಕೊಳ್ಳುವವರಿಗೆ ಬಿಲ್‌ಗಳ ಆಧಾರದ ಮೇಲೆ 3ಸಾವಿರ ದೊರೆಯಲಿದೆ ವಿಮಾ ಯೋಜನೆಯ ಹಣ ವಾರ್ಷಿಕ 956ರೂ ಆಗಿದ್ದು, ಕಾರ್ಮಿಕ ಕೇವಲ 147 ರು. ಮಾತ್ರ ಕಟ್ಟಬೇಕು. ಬಾಕಿ ಉಳಿದ 813ರು. ಅನ್ನು ತೆಂಗು ಅಭಿವೃದ್ಧಿ ಮಂಡಳಿ ವಿಮ ಕಟ್ಟಲಿದೆ. ಹಣ ಪಾವತಿಸಿದ ಒಂದು ತಿಂಗಳೊಳಗೆ ಬಾಂಡ್ ಕಾರ್ಮಿಕರ ಕೈ ಸೇರಲಿದೆ ಎಂದರು. ಹೇಗೆ ಅರ್ಜಿ ಸಲ್ಲಿಸುವುದು? ಕೇರಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಸಂಪರ್ಕಿಸಬೇಕು ಅಥವಾ . ತೆಂಗು ಉತ್ಪಾದಕರ ಕಂಪನಿ ನಿರ್ದೇಶಕರು ಹಾಗೂ ಇಲಾಖೆಯಲ್ಲಿ ದೊರಕುವ ಅರ್ಜಿಯನ್ನು ಭರ್ತಿ ಮಾಡಿ, ಜಿಲ್ಲಾ ತೋಟಗಾರಿಕೆ ಇಲಾಖೆ ಕಳುಹಿಸಿದರೆ, ಅಂತಹ ಅರ್ಜಿಗಳನ್ನು ಅಧಿಕಾರಿಗಳು ನೇರವಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಕಳುಹಿಸಿಕೊಡುತ್ತಾರೆ ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ಸೀನಿಯರ್ ಪೀಲ್ಡ್ ಆಫೀಸರ್ ಧನಶೇಖರ್ ತೆಂಗು ಉತ್ಪಾದಕರ ಕಂಪನಿ ತೆಂಗು ಬೋರ್ಡ್ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಲತ್ತುಗಳನ್ನು ಪಡೆಯಬೇಕೆಂದರು ಈ ಸಂದರ್ಭದಲ್ಲಿ ತೆಂಗು ಉತ್ಪಾದಕರ ಕಂಪನಿಯ ನಿರ್ದೇಶಕರಾದ ವಸಂತ್ ಕುಮಾರ್ ಹಾಗೂ ಕಚೇರಿ ವ್ಯವಸ್ಥಾಪಕರಾದ ಮಂಜುಳ ಇದ್ದರು .