ತರೀಕೆರೆಅಡಕೆ ಸಿಪ್ಪೆ ಕೇವಲ ತ್ಯಾಜ್ಯವಲ್ಲ, ಅತ್ಯುತ್ತಮ ಉತ್ಕರ್ಷ ಸಾವಯವ ಗೊಬ್ಬರವಾಗಿ ನಾವು ಬಳಕೆ ಮಾಡಬೇಕು ಎಂದು ನೇರಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಶೇಖರಪ್ಪ ತಿಳಿಸಿದ್ದಾರೆ.

ನೇರಲೆಕೆರೆ ಗ್ರಾಮದಲ್ಲಿ ಮಣ್ಣು ಪರೀಕ್ಷೆ ಮತ್ತು ನಿರ್ವಹಣೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ,ತರೀಕೆರೆ

ಅಡಕೆ ಸಿಪ್ಪೆ ಕೇವಲ ತ್ಯಾಜ್ಯವಲ್ಲ, ಅತ್ಯುತ್ತಮ ಉತ್ಕರ್ಷ ಸಾವಯವ ಗೊಬ್ಬರವಾಗಿ ನಾವು ಬಳಕೆ ಮಾಡಬೇಕು ಎಂದು ನೇರಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಶೇಖರಪ್ಪ ತಿಳಿಸಿದ್ದಾರೆ.

ಸಮೀಪದ ನೇರಲಕೆರೆ ಗ್ರಾಮದ ಈಶ್ವರಪ್ಪರವರ ಕೃಷಿ ತೋಟದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಣ್ಣು ಪರೀಕ್ಷೆ ಮತ್ತು ನಿರ್ವಹಣೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ನಾವೆಲ್ಲರೂ ಅಡಕೆ ಸಿಪ್ಪೆಯನ್ನು ತ್ಯಾಜ್ಯವಾಗಿ ನಾವು ಎಸೆಯುತ್ತಿದ್ದೇವೆ. ಖರ್ಚು ಇಲ್ಲದೆ ಅತ್ಯುತ್ತಮ ಸಾವಯವ ಗೊಬ್ಬರವಾಗಿ ತಯಾರಿಸಿ ನಮ್ಮ ಕೃಷಿಯಲ್ಲಿ ನಾವು ಬಳಸಬೇಕು. ನರೇಗಾ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ, ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಇಂತಹ ಕೃಷಿ ತರಬೇತಿಗಳನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಬಹು ಮುಖ್ಯವಾಗಿ ಯೋಜನೆಯಿಂದ ಕೃಷಿ ಅನುದಾನ, ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರ, ಶ್ರೀ ಪದ್ಧತಿ ಭತ್ತ ನಾಟಿ, ಕೃಷಿ ಮೇಳಗಳು ಹೀಗೆ ರೈತರಿಗೆ ಉಪಯೋಗ ವಾಗುವ ಅನೇಕ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಉಪ ಸಹಾಯಕ ತೋಟಗಾರಿಕೆ ಅಧಿಕಾರಿ ಧನಂಜಯ ಮಾತನಾಡಿ ಅಡಕೆ ಸುಲಿದ ನಂತರ ಸಿಪ್ಪೆಯನ್ನು ಎಲ್ಲೆಂದರಲ್ಲಿ ಬಿಸಾಡಿ ಅಗ್ನಿ ಅವಘಡಗಳಿಗೆ ಕಾರಣವಾಗುವ ಬದಲು ಸಿಪ್ಪೆ ಬಳಸಿ ಕಾಂಪೋಸ್ಟ್ ತಯಾರಿಸುವ ಮೂಲಕ ತೋಟಕ್ಕೆ ಅಗತ್ಯವಿರುವ ಗೊಬ್ಬರ ಉತ್ಪಾದಿಸಿಕೊಳ್ಳಬಹುದು. ಅಡಕೆ ಸಿಪ್ಪೆ ಸ್ವಲ್ಪ ಒಣಗಿದ ಮೇಲೆ ಅದರ ಮೇಲೆ ಸಗಣಿ–ಗಂಜಳ ಹಾಕಿ ಅದರ ಜೊತೆಗೆ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಸೂಕ್ಷ್ಮಾಣು ಜೀವಿಗಳ ಮಿಶ್ರಣ ಬೆರೆಸಿದರೆ ಅದು ಕೆಲವೇ ದಿನಗಳಲ್ಲಿ ಕೊಳೆಯುತ್ತದೆ. ನಂತರ ಎರೆಹುಳು ಬಿಟ್ಟರೆ ಕೆಲವೇ ದಿನಗಳಲ್ಲಿ ಅದು ಅತ್ಯುತ್ತಮ ಸಾವಯವ ಗೊಬ್ಬರವಾಗಿ ರೂಪುಗೊಂಡು ಕೃಷಿ ಬೆಳೆ ಗಳಿಗೆ ಬಳಸಲು ಉತ್ತಮವಾಗಿದೆ ಎಂದು ಪ್ರಾತ್ಯಕ್ಷತೆ ಮೂಲಕ ರೈತರಿಗೆ ತಿಳಿಸಿದರು.ಒಕ್ಕೂಟ ಅಧ್ಯಕ್ಷೆ ಪಾರ್ವತಮ್ಮ. ತೋಟಗಾರಿಕೆ ಇಲಾಖೆ ಅಧಿಕಾರಿ ಕಾರ್ತಿಕ್, ವಲಯ ಮೇಲ್ವಿಚಾರಕ ಹೊಮ್ಯನಾಯ್ಕ್, ಕೃಷಿ ಮೇಲ್ವಿಚಾರಕ ಸಂತೋಷ್, ಈಶ್ವರಪ್ಪ, ಮಲ್ಲಿಕಾರ್ಜುನಪ್ಪ, ಬಸವರಾಜಪ್ಪ, ಕಾಂತರಾಜ್ ಸೇವಾಪ್ರತಿನಿಧಿ ಉಷಾ, ರಮ್ಯ ಪ್ರಗತಿ ಬಂಧು ಮತ್ತು ಸ್ವ ಸಹಾಯ ಸಂಘದ ಸದಸ್ಯರು, ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

13ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ನಡೆದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮವನ್ನು ನ್ನುನೇರಲಕೆರೆ ಗ್ರಾಪಂ ಅಧ್ಯಕ್ಷ ಹೇಮಶೇಖರಪ್ಪ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಕುಸುಮಾದರ್, ಕೃಷಿ ಮೇಲ್ವಿಚಾರಕ ಸಂತೋಷ್ ಮತ್ತಿತರರು ಇದ್ದರು.