ಸಾರಾಂಶ
ಅಣ್ಣೂರು ಸತೀಶ್
ಕನ್ನಡಪ್ರಭ ವಾರ್ತೆ ಭಾರತೀನಗರಕೊಬ್ಬರಿ ಖರೀದಿಸಿ 3 ತಿಂಗಳಾದರೂ ರಾಜ್ಯ ಸರ್ಕಾರ ಬ್ಯಾಂಕ್ ಖಾತೆಗೆ ಹಣ ಹಾಕದೇ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರಿಗೆ ಹಣ ಪಾವತಿಯಾಗಿದೆ. ಆದರೆ, ರಾಜ್ಯ ಸರ್ಕಾರ ಹಣ ಪಾವತಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಮದ್ದೂರು ತಾಲೂಕಿನಲ್ಲಿ ರೈತರು ಕಬ್ಬು, ಭತ್ತ, ರಾಗಿ ಜೊತೆಗೆ ತೆಂಗು ಬೆಳೆಯನ್ನು ನಂಬಿ ಬದುಕುತ್ತಿದ್ದಾರೆ. ಬರಗಾಲದಲ್ಲಿ ತೆಂಗಿನ ಮರಗಳು ಒಣಗುತ್ತಿದ್ದ ವೇಳೆಯೂ ಟ್ಯಾಂಕರ್ ಮೂಲಕ ನೀರೂಣಿಸಿ ಮರಗಳನ್ನು ರಕ್ಷಿಸಿ, ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದಾರೆ.
ರೈತರು ಕೊಬ್ಬರಿಯನ್ನು ಮದ್ದೂರಿನ ಎಪಿಎಂಸಿ ಮಾರುಕಟ್ಟೆ ಕೊಬ್ಬರಿ ಖರೀದಿ ಕೇಂದ್ರಕ್ಕೆ ನೀಡಿದ್ದಾರೆ. ಸುಮಾರು 5400 ಕ್ವಿಂಟಲ್ ಕೊಬ್ಬರಿಯನ್ನು ರೈತರಿಂದ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಕ್ವಿಂಟಲ್‌ಗೆ 12,000 ರು. ಹಣ ರೈತರ ಖಾತೆಗೆ ಜಮೆಯಾದರೂ, ರಾಜ್ಯ ಸರ್ಕಾರದಿಂದ ನೀಡಬೇಕಿದ್ದ 1500 ರು ಹಣ ಇನ್ನೂ ಬಂದಿಲ್ಲ.ಏಪ್ರಿಲ್ ತಿಂಗಳಿಂದ ಕೊಬ್ಬರಿ ಖರೀದಿ ಕೇಂದ್ರವನ್ನು ಜಿಲ್ಲಾದ್ಯಂತ ತೆರೆದು ಕೊಬ್ಬರಿ ಖರೀದಿ ಮಾಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ರೈತರ ಖಾತೆಗೆ ಹಣ ಜಮಾ ಮಾಡಿದೆ. ಆದರೆ, ರಾಜ್ಯ ಸರ್ಕಾರ ಹಣ ಪಾವತಿ ಮಾಡದೇ ಬೇಜಾವಬ್ದಾರಿ ಪ್ರದರ್ಶಿಸುತ್ತಿದೆ. 6 ತಿಂಗಳ ಹಿಂದೆಯೇ ಖರೀದಿಸಬೇಕಿದ್ದ ಕೊಬ್ಬರಿಯನ್ನು ತಡವಾಗಿ ಖರೀದಿಸಲಾಗಿದೆ. ಈ ಹಣ ನಂಬಿಕೊಂಡು ರೈತರು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ದಾಖಲಾತಿ ಮಾಡಬೇಕಿದೆ. ಹಣ ನೀಡುವಂತೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿ ಅಥವಾ ಮೇಲಾಧಿಕಾರಿಗಳ ಹೆಸರು ಹೇಳಿ ನುಣುಚಿ ಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಬರಗಾಲದ ಬೆಳೆ ಪರಿಹಾರ ಹಣವನ್ನು ಸರ್ಕಾರ ಸಮರ್ಪಕವಾಗಿ ವಿತರಿಸಲು ವಿಫಲವಾಗಿದೆ. ಕೂಡಲೇ ರೈತರ ಖಾತೆಗೆ ಕೊಬ್ಬರಿ ಮತ್ತು ಬೆಳೆ ಪರಿಹಾರ ಹಣ ಜಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಜಿಲ್ಲಾದ್ಯಂತ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಸಿದ 15 ದಿನದೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಮಾತ್ರ ರೈತರಿಗೆ ಅನ್ಯಾಯವಾಗುತ್ತಿದೆ. ಜಿಲ್ಲೆಯವರೇ ಆದ ಎನ್ .ಚಲುವರಾಯಸ್ವಾಮಿ ಕೃಷಿ ಸಚಿವರಾಗಿದ್ದು, ಸರ್ಕಾರದಿಂದ ರೈತರಿಗೆ ಕೊಡಬೇಕಾಗಿರುವ ಹಣವನ್ನು ಪಾವತಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಕೊಬ್ಬರಿ ಖರೀದಿಸಿದ ರೈತರಿಗೆ ಹಣ ಬಂದಿಲ್ಲ ಎಂಬುದು ನನಗೆ ತಿಳಿದಿದೆ. ಈ ಬಗ್ಗೆ ಕೃಷಿ, ಜಿಲ್ಲಾ ಉಸ್ತುವಾರಿ ಮಂತ್ರಿ ಎನ್ . ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದು ರೈತರಿಗೆ ಕೊಡಬೇಕಾಗಿರುವ ಕೊಬ್ಬರಿ ಹಣ ರಾಜ್ಯ ಸರ್ಕಾರದಿಂದ ಕೊಡಿಸಲು ಮುಂದಾಗುತ್ತೇನೆ.
-ಮಧು ಜಿ.ಮಾದೇಗೌಡ, ಶಾಸಕರು.2500 ಕೆಜಿ ಕೊಬ್ಬರಿಯನ್ನು ಮದ್ದೂರು ಖರೀದಿ ಕೇಂದ್ರಕ್ಕೆ ನೀಡಿದ್ದೇನೆ. 3 ತಿಂಗಳು ಕಳೆದರೂ ಇದುವರೆಗೂ ನಮ್ಮ ಖಾತೆಗೆ ಹಣ ಜಮೆ ಮಾಡಿಲ್ಲ. ಈ ಬಗ್ಗೆ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.-ಬಿ.ಎಂ.ನಂಜೇಗೌಡ, ರೈತ ಮುಖಂಡರು.
ಮಂಡ್ಯ ಜಿಲ್ಲೆಯಲ್ಲಿ ಬಹಳಷ್ಟು ರೈತರು ತೆಂಗು ಬೆಳೆಯನ್ನೇ ಅವಲಂಬಿಸಿದ್ದಾರೆ. ಬೆಳೆ ಉಳಸಿಕೊಳ್ಳಲು ಟ್ಯಾಂಕರ್ ಮತ್ತು ಬೋರ್ ವೆಲ್ ಮೂಲಕ ನೀರು ಹರಿಸಿ ತೆಂಗು ಬೆಳೆದಿದ್ದಾರೆ. ಕೊಬ್ಬರಿ ಖರೀದಿ ಮಾಡಿ 3 ತಿಂಗಳಾದರೂ ಹಣ ಪಾವತಿಸದಿರುವುದು ಎಷ್ಟು ಸರಿ.-ದೇವರಾಜು, ರೈತ, ಯಡನಾಹಳ್ಳಿ.ಮದ್ದೂರು ತಾಲೂಕಿನಿಂದ ಒಟ್ಟು 5400 ಕ್ವಿಂಟಾಲ್ ಕೊಬ್ಬರಿಯನ್ನು ರೈತರಿಂದ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹಣ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗಿದೆ. ರಾಜ್ಯ ಸರ್ಕಾರದ ಹಣ ಶೀಘ್ರವೇ ರೈತರ ಖಾತೆಗೆ ಜಮೆ ಆಗಲಿದೆ.
-ಶ್ರೀನಿವಾಸ್, ಮದ್ದೂರು ಕೊಬ್ಬರಿ ಖರೀದಿ ಕೇಂದ್ರದ ಕಿರಿಯ ಸಹಾಯಕ.