ಕೊಬ್ಬರಿ ನೋಂದಣಿ ಸ್ಥಗಿತ: ರೈತರ ಪ್ರತಿಭಟನೆ

| Published : Feb 10 2024, 01:48 AM IST

ಸಾರಾಂಶ

ನಫೆಡ್ ಕೇಂದ್ರದಲ್ಲಿ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು. ಏಕಾಏಕಿ ಸ್ಥಗಿತಗೊಂಡಿದ್ದರಿಂದ ರೊಚ್ಚಿಗೆದ್ದ ರೈತಾಪಿಗಳು ಎಪಿಎಂಸಿ ಆವರಣದ ಮುಂಭಾಗ ಕೆಲಕಾಲ ರಸ್ತೆ ತಡೆ ಮಾಡಿದ ಘಟನೆ ನಡೆಯಿತು.

ಕನ್ನಡಪ್ರಭವಾರ್ತೆ ತುರುವೇಕೆರೆ

ನಫೆಡ್ ಕೇಂದ್ರದಲ್ಲಿ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು. ಏಕಾಏಕಿ ಸ್ಥಗಿತಗೊಂಡಿದ್ದರಿಂದ ರೊಚ್ಚಿಗೆದ್ದ ರೈತಾಪಿಗಳು ಎಪಿಎಂಸಿ ಆವರಣದ ಮುಂಭಾಗ ಕೆಲಕಾಲ ರಸ್ತೆ ತಡೆ ಮಾಡಿದ ಘಟನೆ ನಡೆಯಿತು.

ಶುಕ್ರವಾರ ಮಧ್ಯಾಹ್ನ ರೈತರು ಪಟ್ಟಣದ ಎಪಿಎಂಸಿ ಎದುರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಕೆಲ ಸಮಯ ದಬ್ಬೇಘಟ್ಟ ರಸ್ತೆ ತಡೆ ನಡೆಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರಾರಂಭಗೊಂಡಿರುವ ನಫೆಡ್ ಕೇಂದ್ರದ ಮೂಲಕ ಕೊಬ್ಬರಿ ಮಾರಲು ನೋಂದಣಿ ಮಾಡಿಸಲು ರಾತ್ರಿಯಿಂದಲೇ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೂ ಸರ್ವರ್ ಸಮಸ್ಯೆ ಎದುರಾದ ಕಾರಣ ರೈತರು ತಂದಿದ್ದ ಆಧಾರ್ ಕಾರ್ಡ್ ಮೇಲೆ ನೋಂದಣಿ ಮಾಡಿಸುವ ದಿನಾಂಕವನ್ನು ಬರೆದು ಕಳಿಸಲಾಗುತ್ತಿತ್ತು. ಮಂಗಳವಾರ, ಬುಧವಾರ, ಗುರುವಾರ ನೋಂದಣಿ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ನೋಂದಣಿಯನ್ನು ನಿಲ್ಲಿಸಲಾಯಿತು. ನೋಂದಣಿ ಮಾಡಿಸಲು ಆಗಮಿಸಿದ್ದ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿ ನಾವು ರಾತ್ರಿ ಇಡೀ ಕಾದೂ ಕೂತರು ನಮಗೆ ನೋಂದಣಿಯಾಗಿಲ್ಲ. ನೋಂದಣಿ ಕೇಂದ್ರದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ರಾಜ್ಯದಿಂದ ೬೨ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಲು ಅನುಮತಿ ನೀಡಲಾಗಿದೆ. ಹಾಸನ ಜಿಲ್ಲೆಯಿಂದಲೇ ಅತೀ ಹೆಚ್ಚು ರೈತರು ನೋಂದಣಿ ಮಾಡಿಸಿದ್ದಾರೆ. ರಾಜ್ಯದಲ್ಲಿಯೇ ಹೆಚ್ಚು ಕೊಬ್ಬರಿ ಉತ್ಪಾದಿಸುವ ತುಮಕೂರು ಜಿಲ್ಲೆಯಲ್ಲಿ ಕಡಿಮೆ ನೋದಣಿ ಮಾಡಲಾಗಿದೆ. ನೋಂದಣಿಯಲ್ಲಿಯೇ ಅನುಮಾನ ಇದೆ. ತುರುವೇಕೆರೆಯಲ್ಲಿ ೫೦೧೨ ರೈತರು ನೋದಣಿ ಮಾಡಿಸಿದ್ದಾರೆಂದು ದಾಖಲಾತಿ ಮೂಲಕ ತಿಳಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತ ರೈತರಿಗೆ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ಅಧಿಕಾರಿಗಳು ನಾಪತ್ತೆ:

ರೈತರಿಗೆ ಉತ್ತರ ನೀಡಲು ಸಾಧ್ಯವಾಗದೆ ನಫೆಡ್ ಜಿಲ್ಲಾ ವ್ಯವಸ್ಥಾಪಕ ಕಿರಣ್ ಮತ್ತು ಅಲ್ಲಿಯ ಸಿಬ್ಬಂದಿ ಪೋನ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾದರು. ಸಂಬಂಧಿಸಿದ ಯಾವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ಧೋರಣೆ ತೋರಿದರು. ನಂತರ ಸ್ಥಳಕ್ಕೆ ತಹಸೀಲ್ದಾರ್‌ ಆಗಮಿಸಿದರು.

ತಹಸೀಲ್ದಾರ್‌ ಭರವಸೆ:

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರೈತರ ಜೊತೆ ಮಾತನಾಡಿ, ಈಗಾಗಲೇ ನೋಂದಣಿ ಕೇಂದ್ರದ ಜಿಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ತಾಲೂಕಿನಲ್ಲಿ ೧೬ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಯಾವ ಕೇಂದ್ರದಲ್ಲಿ ಎಷ್ಟು ರೈತರನ್ನು ನೋಂದಣಿ ಮಾಡಲಾಗಿದೆ. ಯಾವ ಸಮಯದಲ್ಲಿ ನೋಂದಣಿ ಮಾಡಲಾಗಿದೆ. ಈ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಮಾಹಿತಿಯಲ್ಲಿ ಲೋಪ ಬಂದರೆ ಕೂಡಲೇ ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಅವರ ಭರವಸೆಯ ಮೇರೆಗೆ ರೈತರು ಪ್ರತಿಭಟನೆಯನ್ನು ಕೈಬಿಟ್ಟರು. ಪ್ರತಿಭಟನೆಯಲ್ಲಿ ಮುಖಂಡರಾದ ವಿ.ಟಿ. ವೆಂಕಟರಾಮಯ್ಯ, ಕೋಳಾ ನಾಗರಾಜು, ಜಗದೀಶ್, ಉಗ್ರಯ್ಯ, ಲೋಕಮ್ಮನಹಳ್ಳಿ ಕಾಂತರಾಜು, ಹಿಂಡುಮಾರನಹಳ್ಳಿ ಕುಮಾರಣ್ಣ, ಲೋಕೇಶ್, ಮೋಹನ್ ಕುಮಾರ್, ಬಸವರಾಜು, ರೇಣುಕಯ್ಯ, ಲಕ್ಷ್ಮಣಗೌಡ ಸೇರಿದಂತೆ ಹಲವು ರೈತರು ಇದ್ದರು.ಫೋಟೊ

ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಯಲ್ಲಿ ರೊಚ್ಚಿಗೆದ್ದ ರೈತರು ಪಟ್ಟಣದ ಎಪಿಎಂಸಿ ಎದುರು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು.