ಕುಡಿವ ನೀರು ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ: ಜಿಲ್ಲಾಧಿಕಾರಿ

| Published : Apr 12 2024, 01:08 AM IST

ಕುಡಿವ ನೀರು ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ನೀರು ಕಾಮಗಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಮುಂದುವರೆಯಬಹುದಾಗಿದೆ. ಆಳಂದ ಮತ್ತು ಅಫಜಲಪೂರ ತಾಲೂಕಿನಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಮುಂಬರುವ ದಿನದಲ್ಲಿ ಸಮಸ್ಯಾತ್ಮಕ‌ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈಗಲೆ ಕ್ರಿಯಾ ಯೋಜನೆ ರೂಪಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬೇಸಿಗೆಯ ಕುಡಿಯುವ‌ ನೀರಿನ ಕಾಮಗಾರಿಗೆ ಕೈಗೊಳ್ಳಲು ಚುನಾವಣೆ ನೀತಿ ಸಂಹಿತೆ ಅಡ್ಡಿ ಬರಲ್ಲ. ಬಿರುಬೇಸಿಗೆಯ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ನಮ್ಮ ಪ್ರಥಮಾದ್ಯತೆ ಆಗಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ಚಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಕುಡಿಯುವ ನೀರು ಕಾಮಗಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಮುಂದುವರೆಯಬಹುದಾಗಿದೆ. ಆಳಂದ ಮತ್ತು ಅಫಜಲಪೂರ ತಾಲೂಕಿನಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಮುಂಬರುವ ದಿನದಲ್ಲಿ ಸಮಸ್ಯಾತ್ಮಕ‌ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈಗಲೆ ಕ್ರಿಯಾ ಯೋಜನೆ ರೂಪಿಸಬೇಕು ಎಂದರು.

ಜಿಲ್ಲೆಯ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನಾರಾಯಪುರ ಜಲಾಶಯದಿಂದ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ 1 ಟಿ.ಎಂ.ಸಿ ನೀರು ಬಿಡುಗಡೆ ಮಾಡಿದ್ದು, ಮಂಗಳವಾರದ ವರೆಗೆ 0.25 ಟಿ.ಎಂ.ಸಿ. ಬಂದಿದೆ. ಉಳಿದ ಪ್ರಮಾಣದ ನೀರಿನ ಪ್ರಮಾಣ 2-3 ದಿನದಲ್ಲಿ ಬರಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸೊನ್ನ ಬ್ಯಾರೇಜಿನ ಕೆಳ ಹಂತದಲ್ಲಿ ಬರುವ ಘತ್ತರಗಾ, ಗಾಣಗಾಪೂರ ಗ್ರಾಮಸ್ಥರು ಕುಡಿಯುವ ನೀರು ಪೂರೈಕೆಗೆ ಆಗ್ರಹಿಸುತ್ತಿರುವ ಕಾರಣ ಈ ಕುರಿತು ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ಡಿ.ಸಿ. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ತೀವ್ರ ಬರ ಎದುರಾಗಿದೆ. ಕುಡಿಯುವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅನುದಾನದ ಯಾವುದೆ ಕೊರತೆಯಿಲ್ಲ. ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸದ್ಯಕ್ಕೆ ಜಿಲ್ಲೆಯ ಯಾವುದೇ ನಗರ-ಪಟ್ಟಣ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಗ್ರಾಮೀಣ ಭಾಗದ 87 ಗ್ರಾಮಗಳಿಗೆ 116 ಬಾವಿ, ಕೊಳವೆ ಬಾವಿ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಕ್ರಮವಾಗಿ ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ ದೌಲಾ ಮತ್ತು ಗ್ರಾಮೀಣ ಕುಡಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಅವರು ಮಾಹಿತಿ ನೀಡಿದರು.

ಪಶುಸಂಗೋಪನಾ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಮುಂದಿನ 26 ವಾರಗಳಿಗೆ ಬೇಕಾಗುವ 5.59 ಲಕ್ಷ‌ ಟನ್ ಮೇವು ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.

ಉಷ್ಣ ಇಳಿಕೆ, ಮಳೆ ಮುನ್ಸೂಚನೆ: ಕಳೆದ‌ ಹತ್ತು ದಿನಗಳಿಂದ ವಿಪರೀತ ಉಷ್ಣ ಕಂಡ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಕೊಂಚ ಕಡಿಮೆಯಾಗಿದೆ. ಮುಂದಿನ 1-2 ದಿನದಲ್ಲಿ‌ ಮಳೆ ಬರುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಹಾಯಕ ಆಯುಕ್ತೆ ರೂಪಿಂದರ್‌ ಸಿಂಗ್ ಕೌರ್‌, ಮಹಾನಗರ ಪಾಲಿಕೆ ಉಪ ಆಯುಕ್ತ ಅರ್.ಪಿ.ಜಾಧವ‌, ಡಿ.ಎಚ್.ಓ ಡಾ.ರವಿಕಾಂತ ಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಇ.ಓ ಮತ್ತಿತರರು ಭಾಗವಹಿಸಿದ್ದರು.