ಸಾರಾಂಶ
ಕಳೆದ 2 ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ ಹಲವು ಅಪಾರ್ಟ್‌ಮೆಂಟ್ ಹಾಗೂ ರಸ್ತೆಗಳು ಜಲಾವೃತ್ತಗೊಂಡು ಜನರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಶೀಘ್ರವೇ ಪರಿಹಾರ ಕ್ರಮಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.
ಹುಬ್ಬಳ್ಳಿ:
ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಾದ ದೇಶಪಾಂಡೆ ನಗರ, ನ್ಯೂ ಕಾಟನ್ ಮಾರ್ಕೆಟ್, ಹೊಸೂರು ನಾಲಾ ಹಾಗೂ ವಿದ್ಯಾನಗರದ ಅಪಾರ್ಟ್‌ಮೆಂಟ್‌ಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ವೀಕ್ಷಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ ಹಲವು ಅಪಾರ್ಟ್‌ಮೆಂಟ್ ಹಾಗೂ ರಸ್ತೆಗಳು ಜಲಾವೃತ್ತಗೊಂಡು ಜನರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಶೀಘ್ರವೇ ಪರಿಹಾರ ಕ್ರಮಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಕೂಡಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಪರಿಹಾರ ಕಾರ್ಯಕ್ಕೆ ಅನುಮತಿ ಪಡೆಯಲಾಗುವುದು ಎಂದರು.ಈ ಮೊದಲು ಮಹಾನಗರ ಪಾಲಿಕೆ ವಲಯ ಕಚೇರಿಗೆ ತಲಾ ₹ 10 ಲಕ್ಷ ನೆರೆ ಪರಿಹಾರಕ್ಕಾಗಿ ಅನುದಾನ ಮೀಸಲಿಡಲಾಗುತ್ತಿತ್ತು. ಈಗ ಯಾವುದೇ ರೀತಿಯ ಅನುದಾನವನ್ನು ಪಾಲಿಕೆಯಲ್ಲಿ ಮೀಸಲಿಟ್ಟಿಲ್ಲ. ಈ ಕುರಿತು ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರೂ ಕೂಡ ಚುನಾವಣಾ ಆಯೋಗದ ಅನುಮತಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಆದಷ್ಟು ಬೇಗನೆ ಅಧಿಕಾರಿಗಳ ಸಭೆ ಕರೆದು ನೆರೆ ಪರಿಹಾರ ಕಾರ್ಯ ನಡೆಸುವ ಕುರಿತು ಚರ್ಚಿಸುತ್ತೇನೆ. ಪ್ರತಿ ಮಳೆಗಾಲ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ಉದ್ಭವಿಸುತ್ತಲೇ ಇದೆ. ಮಳೆ ಹಾನಿ ತಡೆಗೆ ಮಹಾನಗರದಲ್ಲಿ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಆದಷ್ಟು ಶೀಘ್ರದಲ್ಲಿಯೇ ಹಾನಿಗೊಂಡ ಮನೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಈ ವೇಳೆ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಮೀನಾಕ್ಷಿ ವಂಟಮೂರಿ, ಶಶಿ ಡಂಗನವರ, ವಿಷ್ಣು, ವಿಲ್ಸನ್, ಮಹಾಂತೇಶ, ಸತೀಶ, ರವಿಕುಮಾರ ಸೇರಿದಂತೆ ಹಲವರಿದ್ದರು.