ಸಾರಾಂಶ
ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ ಐಡಿಯಾ ಲ್ಯಾಬ್ ವತಿಯಿಂದ ಸೋಮವಾರ ರಾಷ್ಟ್ರಮಟ್ಟದ ಹ್ಯಾಕಥಾನ್- ವೇವ್ 2.0 ಕಾರ್ಯಕ್ರಮವನ್ನು ಬೆಂಗಳೂರಿನ ಐಬಿಎಂ ಟೆಕ್ನಾಲಜಿಯ ಹಿರಿಯ ತಂತ್ರಜ್ಞ ಸಿ.ರಾಘವೇಂದ್ರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಐಟಿ ಕ್ಷೇತ್ರದಲ್ಲಿಂದು ಕೋಡಿಂಗ್ ತಂತ್ರಜ್ಞಾನಕ್ಕೆ ಬಹಳ ಮಹತ್ವ ಇದೆ, ಈ ಜ್ಞಾನದ ಹರವು ಮತ್ತು ಅಳವಡಿಕೆ ತಿಳಿದುಕೊಂಡರೆ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ಬೆಂಗಳೂರಿನ ಐಬಿಎಂ ಟೆಕ್ನಾಲಜಿಯ ಹಿರಿಯ ತಂತ್ರಜ್ಞ ಸಿ.ರಾಘವೇಂದ್ರ ಹೇಳಿದರು.ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ ಐಡಿಯಾ ಲ್ಯಾಬ್ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಹ್ಯಾಕಥಾನ್- ವೇವ್ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಇಸಿ ಸಾಧಿಸಿದ ಪ್ರಗತಿ ಹಾಗೂ ಶೈಕ್ಷಣಿಕ ಸೇವೆಯನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ವೀಣಾ ಸೋರಗಾಂವಿ ಅಧ್ಯಕ್ಷತೆ ವಹಿಸಿ ಕಾಲೇಜಿನ ವಿವಿಧ ಸಾಧನೆಗಳನ್ನು ವಿವರಿಸಿ, ಇಂತಹ ಸ್ಪರ್ಧೆಗಳು ಯುವ ಬುದ್ಧಿವಂತ ವಿದ್ಯಾರ್ಥಿಗಳಿಗೆ ಐಟಿ ಕ್ಷೇತ್ರದಲ್ಲಿ ತಮ್ಮ ಜ್ಞಾನ, ಕೌಶಲ್ಯಗಳನ್ನು ಒರೆಗೆ ಹಚ್ಚಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಲವಾರು ತಾಂತ್ರಿಕ ನಾವೀನ್ಯತೆಯ ಕೌಶಲ್ಯಗಳನ್ನು ಬಳಸಿಕೊಳ್ಳಲು ಸಹಕಾರಿಯಾಗುತ್ತವೆ, ಸ್ಪರ್ಧೆಯಲ್ಲಿ ಗೆಲ್ಲುವುದಷ್ಟೇ ಮುಖ್ಯವಲ್ಲ್ಲ, ಕಲಿಕೆ ಮುಖ್ಯ ಎಂದು ಹೇಳಿದರು.ಡೀನ್ ಆರ್ & ಡಿ, ಐಸಿಟಿ ಮತ್ತು ಕಾರ್ಯಕ್ರಮ ಸಂಯೋಜಕ ಡಾ.ಮಹಾಬಳೇಶ. ಎಸ್.ಕೆ. ಸ್ವಾಗತಿಸಿ ಪರಿಚಯಿಸಿದರು, ಐಡಿಯಾ ಲ್ಯಾಬ್ ಸಂಯೋಜಕ, ಎಐಎಂಎಲ್ ಮುಖ್ಯಸ್ಥ ಡಾ. ಅನಿಲ್ ದೇವನಗಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಹ್ಯಾಕಥಾನ್-ವೇವ್ 2.0 ಕುರಿತು ಇದೊಂದು ಪರಿಣಾಮಕಾರಿ ಹಾಗೂ ನಿಗದಿತ ಸಮಯದ ಚೌಕಟ್ಟಿನಲ್ಲಿ ನಿರ್ದಿಷ್ಟ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸ್ಪರ್ಧೆಯಾಗಿದೆ. ಈ ಸ್ಫರ್ಧೆಯಲ್ಲಿ ರಾಜ್ಯದ ಮತ್ತು ನೆರೆಯ ರಾಜ್ಯದ ಸುಮಾರು 398 ವಿದ್ಯಾರ್ಥಿಗಳು 106 ತಂಡ ರಚಿಸಿಕೊಂಡು ಭಾಗವಹಿಸಿದ್ದಾರೆ ಎಂದು ಹೇಳಿದರು.
ಬಿಇಸಿ ಸ್ವರ ತಂಡದವರು ಪ್ರಾರ್ಥಿಸಿದರು. ಸಂಯೋಜಕ ಡಾ.ಆರ್.ಎಲ್. ನಾಯಕ್ ವಂದಿಸಿದರು. ಇ &ಸಿ ವಿಭಾಗದ ಡಾ. ವಿಜಯಲಕ್ಷ್ಮಿ ಜಿಗಜಿನ್ನಿ ನಿರೂಪಿಸಿದರು. ಐಐಐಟಿ ಧಾರವಾಡದ ಡಾ.ಮಂಜುನಾಥ ವಿ. ಹಾಗೂ ಡಾ. ಆನಂದ ಭಾರಂಗಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಸಿ.ವಿ. ಕೋಟಿ ಹಾಗೂ ಡೀನ್ ಗಳಾದ ಡಾ.ಪಿ.ಎನ್. ಕುಲಕರ್ಣಿ, ಡಾ.ಭಾರತಿ ಮೇಟಿ. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ. ಚಂದ್ರಶೇಖರ, ಪ್ಲೇಸಮೆಂಟ್ ಆಫೀಸರ್ ಡಾ.ಎಸ್.ಜಿ. ಕಂಬಾಳಿಮಠ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.