ಸಾರಾಂಶ
ಕಲಬುರಗಿ ನಗರದ ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಆಸ್ಪತ್ರೆಯ ಅಧ್ಯಕ್ಷ ಬಾಬುಮಿಯಾ ಮನೂರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಆಸ್ಪತ್ರೆಯ ಅಧ್ಯಕ್ಷ ಬಾಬುಮಿಯಾ ಮನೂರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಧ್ವಜಾರೋಹಣದ ನಂತರ ಶಿಸ್ತುಬದ್ಧ ರಾಷ್ಟ್ರಗೀತೆ ನಡೆಯಿತು. ವೇದಿಕೆಯ ಮೇಲಿದ್ದ ಗಣ್ಯರೆಲ್ಲರೂ ಮಹಾತ್ಮ ಗಾಂಧೀಜಿ ಹಾಗೂ ಡಾ.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಡಾ ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಪ್ರಕಾರ ಸ್ವತಂತ್ರ ಗಣರಾಜ್ಯವಾಗಿ ಅಸ್ತಿತ್ವ ಪಡೆದ ಭವ್ಯ ಭಾರತ ದೇಶವು ಇಂದು ಮಹಾನ್ ಸಾಧಕರ ಅನುಗ್ರಹೀತ ದೇಶವಾಗಿದೆ ಎಂದರು. ಅಲ್ಲದೇ, ಆಸ್ಪತ್ರೆಯು ಕಳೆದ ಮೂರು ವರ್ಷಗಳಲ್ಲಿ ಕಲಬುರಗಿ ಭಾಗದ ಜನರ ಮನೆಮಾತಾಗಲು ಕಾರಣೀಭೂತರಾದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.ನಂತರ ಮಾತನಾಡಿದ ಆಸ್ಪತ್ರೆಯ ನಿರ್ದೇಶಕರಾದ ಡಾ. ಫಾರೂಕ್ ಅಹ್ಮದ್ ಮನೂರ್ ಅವರು, ಭಾರತದ ಮಹೋನ್ನತ ಸಂವಿಧಾನದ ಆಶಯ ಪ್ರಕಾರ ಹಿಂದೂ ಮುಸ್ಲಿಂ ಕ್ರೈಸ್ತ ಸಹಿತ ಎಲ್ಲಾ ಸಮುದಾಯ ಬಾಂಧವರು ಶಾಂತಿ - ಸೌಹಾರ್ದತೆಯ - ಸಹಬಾಳ್ವೆ ನಡೆಸಿದಾಗ ಸಂವಿಧಾನದ ನಿಜವಾದ ಆಶಯ ಈಡೇರುತ್ತದೆ ಎಂದರು.
ಮಣೂರ್ ಆಸ್ಪತ್ರೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಭಾಗದ ಜನಸ್ನೇಹಿ ಆಸ್ಪತ್ರೆಯಾಗಿ ಜನಮನ ಗೆಲ್ಲುವುದರಲ್ಲಿ ನಮ್ಮ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ ಎಂದರು. ಇನ್ನು ಮುಂದೆಯೂ ಜನರಿಗೆ ಮಾನವೀಯ ಸ್ಪರ್ಶದೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆಯ ಹೆಸರು ಇನ್ನೂ ಎತ್ತರಕ್ಕೆ ಬೆಳೆಯಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಡಾ.ಮುಜಾಮಿಲ್, ಡಾ. ಶ್ರೀಕಾಂತ್, ಡಾ.ಸಫೀಯಾ, ಡಾ.ಮಿಸ್ಬಾ, ಡಾ. ರಸೂಲ್, ಡಾ. ಲಕ್ಷ್ಮೀಕಾಂತ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.