ಸಾರಾಂಶ
ಈ ಹಿಂದೆ ಕಾಡಾನೆಗಳು ಕಾಫಿ, ಅಡಕೆ, ತೆಂಗು ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ, ಈಗ ಕಾಫಿಯ ಹಣ್ಣುಗಳನ್ನು ಮೆದ್ದು ನಷ್ಟಪಡಿಸುತ್ತಿವೆ. ಇದರಿಂದ ಬೆಳೆಗಾರರು ಆತಂಕಿತರಾಗಿದ್ದಾರೆ.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಫಲಭರಿತ ಗಿಡಗಳನ್ನು ನಾಶಪಡಿಸುತ್ತಿದ್ದ ಕಾಡಾನೆಗಳಿಂದ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗ ಕಾಡಾನೆ ಲದ್ದಿಯಲ್ಲಿ ಜೀರ್ಣವಾಗದ ಕಾಫಿ ಬೀಜಗಳು ಯಥೇಚ್ಛವಾಗಿ ಕಂಡುಬರುತ್ತಿದ್ದು, ಕಾಫಿ ಬೀಜಗಳನ್ನು ತಿನ್ನುತ್ತಿರುವುದರಿಂದ ಬೆಳೆಗಾರರು ಆತಂಕಿತರಾಗಿದ್ದಾರೆ.
ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಕೆ, ತೆಂಗು ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ, ಈಗ ಕಾಫಿಯ ಹಣ್ಣುಗಳನ್ನು ಮೆದ್ದು ನಷ್ಟಪಡಿಸುತ್ತಿವೆ. ಇದಕ್ಕೆ ಕಾಫಿ ತೋಟದಲ್ಲಿ ಕಾಡಾನೆಗಳ ಲದ್ದಿಯಲ್ಲಿ ಅಧಿಕವಾಗಿ ಕಂಡುಬರುತ್ತಿರುವ ಕಾಫಿ ಬೀಜಗಳು ಸಾಕ್ಷ್ಯ ನೀಡಿದೆ.ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ 5-6 ಆನೆಗಳು ಅಡ್ಡಾಡುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಭತ್ತದ ಕಟಾವು ಮುಗಿದಿದ್ದು, ಈಗ ಕಾಡಾನೆಗಳು ತೋಟಕ್ಕೆ ನುಸುಳಿವೆ. ಕಾಫಿಯ ರೆಂಬೆಗಳನ್ನು ಮುರಿದು ಹಣ್ಣಾಗಿರುವ ಕಾಫಿಯನ್ನು ತಿಂದು ನಷ್ಟಪಡಿಸುತ್ತಿವೆ. ಸರ್ಕಾರ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊನ್ನಪ್ಪ ಒತ್ತಾಯಿಸಿದ್ದಾರೆ.