ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಮಲೆನಾಡು ಭಾಗದಲ್ಲಿ ವರುಣನ ಆರ್ಭಟಕ್ಕೆ ಕಾಫಿ ಗಿಡದಲ್ಲಿನ ಹಣ್ಣುಗಳು ನೆಲಕ್ಕೆ ಉದುರುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ತಮ್ಮ ಗತಿ ಏನು ಎಂಬ ಚಿಂತೆ ಕಾಫಿ ಬೆಳೆಗಾರರನ್ನು ಕಾಡುತ್ತಿದೆ.ಮಳೆರಾಯನ ಆರ್ಭಟಕ್ಕೆ ಬೆಳೆಗಾರ ಹೈರಾಣು:ಕಳೆದ ಒಂದು ವರ್ಷದಿಂದ ಮಲೆನಾಡಿನ ಭಾಗದಲ್ಲಿರುವ ಜನತೆ ಸೂರ್ಯ ರಶ್ಮಿಯನ್ನು ಸರಿಯಾಗಿ ನೋಡೇ ಇಲ್ಲ ಎಂದರೆ ತಪ್ಪಾಗಲಾರದು. ಸತತ ಮಳೆಯಿಂದಾಗಿ ಈ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮಕ್ಕೆ ತೆರಳುವ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿವೆ. ಜನರು ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಟ ಒಂದು ತಿಂಗಳಾದರೂ ಬಿಡುವು ಕೊಡುವಂತೆ ಬೆಳೆಗಾರ ವರುಣನಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ. ಮಳೆಯಿಂದಾಗಿ ತೋಟದೊಳಗಡೆ ಕಾಲಿಟ್ಟರೆ ಜಾರುವಂತಾಗಿದ್ದು ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಒಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆ ಹಾಳಾಗುತ್ತಿದ್ದರೆ ಇನ್ನೊಂದೆಡೆ ಮಳೆರಾಯನ ಅಬ್ಬರಕ್ಕೆ ಕಾಫಿ ಹಾಗೂ ಮೆಣಸು ಕಾಳುಗಳು ಭೂಮಿಯ ಪಾಲಾಗುತ್ತಿದೆ. ತೇವಾಂಶ ಹೆಚ್ಚಾಗಿ ಹಣ್ಣು ಮಣ್ಣಿಗೆ:
ಅತಿಯಾದ ಮಳೆಯು ಬೆಳೆಗಳಿಗೆ ಹಾನಿಯಾಗಿ ಕಾಫಿ ಹಣ್ಣುಗಳು ಉದುರಲು ಕಾರಣವಾಗುತ್ತಿದೆ. ಸತತ ಮಳೆಯಿಂದಾಗಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ, ಕಾಫಿ ಮತ್ತು ಅಡಿಕೆ, ಕಾಳುಮೆಣಸು ಬೆಳೆಗಳು ನೆಲಕಚ್ಚುತ್ತಿವೆ. ಅತಿಯಾದ ಮಳೆಯಿಂದಾಗಿ ಶೇ. 20ಕ್ಕೂ ಹೆಚ್ಚು ಕಾಫಿ ಹಣ್ಣುಗಳು ಉದುರಿ ಹೋಗುತ್ತಿವೆ. ಮಳೆಯ ಅತಿಯಾದ ತೇವಾಂಶವು ಕಾಫಿ ಗಿಡಗಳಲ್ಲಿ ಬೂಷ್ಟು ಮತ್ತು ರೋಗಗಳು ಹರಡಲು ಕಾರಣವಾಗುತ್ತಿದೆ. ಕಾಂಡಕೊರಕ ರೋಗ ಹಾಗೂ ಕೊಳೆರೋಗ ಪ್ರಾರಂಭವಾಗುವ ಭೀತಿ ಎದುರಾಗಿದೆ. ಗಾಳಿಗೆ ದೊಡ್ಡ ಮರಗಳು ಕಾಫಿ ಗಿಡಗಳ ಮೇಲೆ ಬೀಳುತ್ತಿರುವುದರಿಂದ ಇನ್ನಷ್ಟು ತೊಂದರೆ ಎದುರಿಸುವಂತಾಗಿದೆ.ಕಾಫಿ ಬೆಳೆಗಾರ ಮಾಲಹಳ್ಳಿ ಚಂದ್ರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬೆಲೆ, ಕೀಟನಾಶಕ ಬೆಲೆ ಹಾಗೂ ಕಾರ್ಮಿಕರ ವೇತನ ಹೆಚ್ಚಾಗುತ್ತಿದೆ. ಕಾಫಿ ಬೆಲೆ ನೋಡಿ ಎಲ್ಲ ದರಗಳು ಹೆಚ್ಚಾಗುತ್ತಿವೆ. ಆದರೆ, ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಬಂಡವಾಳ ಹಾಕಲೇಬೇಕಿದೆ. ಈಗ ಸುರಿಯುತ್ತಿರುವ ಮಳೆಗೆ ಕಾಫಿ ತೋಟದ ಕಾಫಿ ಉದುರುತ್ತಿದೆ. ಇರುವ ಐದಾರು ಎಕರೆ ಕಾಫಿ ತೋಟ ನಂಬಿಕೊಂಡು ಬದುಕು ಸಾಗಿಸುತ್ತಿದ್ದು ಬ್ಯಾಂಕಿನಲ್ಲಿ ಸಾಲ ಮಾಡಿ ತೋಟದ ಆರೈಕೆ ಮಾಡಿದ್ದು ಕಣ್ಣೆದುರೇ ಬೆಳೆ ಹಾಳಾದರೆ ಏನು ಮಾಡುವುದು ಎಂದು ಅಳಲು ತೋಡಿಕೊಂಡರು.*ಹೇಳಿಕೆ1 ( ರೆಡ್ ಶಾಲು ಹಾಕಿರುವವರು)
ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರ ಕಂಗೆಟ್ಟಿದ್ದಾರೆ. ಕಾಫಿ ಕೊಯ್ಲು ಪ್ರಾರಂಭವಾಗಿದ್ದು ನಿರಂತರ ಮಳೆಯಿಂದ ಕಾಫಿ ಹಣ್ಣು ಉದುರುತ್ತಿದೆ. ಮೊದಲೇ ಕಾಡಾನೆ ಹಾವಳಿ ಅತಿವೃಷ್ಟಿಯಿಂದ ಹೈರಾಣಾಗಿದ್ದಾರೆ. ಉತ್ತಮ ಬೆಲೆ ಇದ್ದರೂ ಕೂಡ ಮಳೆ ಹಾಗೂ ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರ ಮೇಲೊಬ್ಬರು ದೂರದೇ ಎನ್‌ಡಿಆರ್‌ಎಫ್ ಮಾದರಿಯಲ್ಲಿ ಪರಿಹಾರ ಘೋಷಿಸಬೇಕು.- ಅದ್ಧೂರಿ ಚೇತನ್ ಕುಮಾರ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ
ಹೇಳೀಕೆ 2ಕಳೆದ ಒಂದು ವರ್ಷದಲ್ಲಿ ಮಲೆನಾಡಿನಲ್ಲಿ ದಾಖಲೆಗಿಂತ ಹೆಚ್ಚು ಮಳೆಯಾಗುತ್ತಿದೆ. ಈಗ ಗಾಯದ ಮೇಲೆ ಬರೆ ಎಂಬಂತೆ ಒಂದು ವಾರದಿಂದ ನಿರಂತರವಾಗಿ ಮಳೆ ಬರುತ್ತಿದ್ದು ಕಾಫಿ ಕಾಯಿ ಹಾಗು ಹಣ್ಣು ನೆಲ ಕಚ್ಚುತ್ತಿವೆ. ಮುಂದೆ ಯಾವ ರೀತಿ ಕೆಲಸ ಮಾಡಿಸುವುದು ಎಂದು ತೋಚುತ್ತಿಲ್ಲ.- ಮಡೇನಹಳ್ಳಿ ಪ್ರಸನ್ನ ಕುಮಾರ್, ಕಾಫಿ ಬೆಳೆಗಾರ, ಅರೇಹಳ್ಳಿ ರೋಟರಿ ಅಧ್ಯಕ್ಷ
;Resize=(128,128))
;Resize=(128,128))
;Resize=(128,128))