ಮಳೆಯ ರೌದ್ರಾವತಾರಕ್ಕೆ ಕಾಫಿನಾಡು ತತ್ತರ

| Published : Oct 24 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಕಾಫಿಯ ನಾಡು ಮಹಾ ಮಳೆಗೆ ತತ್ತರಿಸುತ್ತಿದೆ. ದಿನೇ ದಿನೇ ಅನಾಹುತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಲೆನಾಡು ಮಾತ್ರ ವಲ್ಲ, ಬಯಲುಸೀಮೆಯ ಹಲವು ತೋಟ, ಹೊಲಗಳು ಜಲಾವೃತವಾಗಿವೆ. ಎಮ್ಮೆಯನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

- ಹಳ್ಳದಲ್ಲಿ ಕೊಚ್ಚಿ ಹೋಗಿ ಓರ್ವ ಸಾವು । ರೈಲ್ವೆ ಹಳಿಗೆ ಹಾನಿ । ತೋಟ ಹೊಲ ಗದ್ದೆಗಳು ಜಲಾವ್ರತ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿಯ ನಾಡು ಮಹಾ ಮಳೆಗೆ ತತ್ತರಿಸುತ್ತಿದೆ. ದಿನೇ ದಿನೇ ಅನಾಹುತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಲೆನಾಡು ಮಾತ್ರ ವಲ್ಲ, ಬಯಲುಸೀಮೆಯ ಹಲವು ತೋಟ, ಹೊಲಗಳು ಜಲಾವೃತವಾಗಿವೆ. ಎಮ್ಮೆಯನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಜನವರಿ 1 ರಿಂದ ಅಕ್ಟೋಬರ್‌ 23 ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 1734 ಮಿ.ಮೀ. ಈವರೆಗೆ ಬಿದ್ದ ಮಳೆ 1946 ಮಿ.ಮೀ. ಅಂದರೆ ಶೇ. 12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಅಕ್ಟೋಬರ್‌ ನಲ್ಲಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಬಯಲುಸೀಮೆ ಸಣ್ಣ ಹಾಗೂ ಮಧ್ಯಮ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಇದರಿಂದಾಗಿ ತೋಟಗಳು, ಹೊಲಗಳು ಜಲಾವೃತವಾಗಿವೆ.

ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯ ಲಕ್ಷ್ಮಣ್‌ಗೌಡ (45) ಎಮ್ಮೆ ಮೇಯಿಸಲು ಬುಧವಾರ ಬೆಳಿಗ್ಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ವಾಪಸ್‌ ಬಂದಿರಲಿಲ್ಲ. ಸಂಜೆ ನಂತರ ಮನೆಯವರು ಹುಡುಕಿದರೂ ಪತ್ತೆ ಯಾಗಲಿಲ್ಲ. ಹಳ್ಳದಲ್ಲಿ ನೀರು ಕಡಿಮೆಯಾದ ಬಳಿಕ ಮೃತ ದೇಹ ಪತ್ತೆಯಾಗಿದೆ. ಎಮ್ಮೆ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಹಳ್ಳಕ್ಕೆ ಬಿದ್ದಿರಬಹುದೆಂದು ಹೇಳಲಾಗುತ್ತಿದೆ.

ಕಾಫಿಗೆ ಬಂದಿರುವ ಕೊಳೆ ರೋಗ ಉಲ್ಬಣಿಸುವ ಭೀತಿ ಎದುರಾಗಿದ್ದರೆ, ಅತ್ತ ಮಳೆಗೆ ರಬ್ಬರ್‌ ಗಿಡಗಳಲ್ಲಿನ ಎಲೆಗಳು ಉದುರುತ್ತಿವೆ. ಇದರಿಂದಾಗಿ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಡಕೆ ಕೊಯ್ಲಿಗೂ ಅಡ್ಡಿಪಡಿಸಿದೆ.ಕೊಚ್ಚಿ ಹೋದ ರೈಲ್ವೆ ಹಳಿ:

ಮಳೆ ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ, ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿ ಯಿಡೀ ಸುರಿಯುತ್ತಿದೆ. ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಚಿಕ್ಕಮಗಳೂರಿನಿಂದ ಬುಧವಾರ ಬೆಳಿಗ್ಗೆ 7.10ಕ್ಕೆ ಶಿವಮೊಗ್ಗಕ್ಕೆ ಪ್ಯಾಸೆಂಜರ್‌ ರೈಲು ಹೊರಟಿದ್ದು, ಕಣಿವೆ ಗ್ರಾಮದ ಬಳಿ ರೈಲ್ವೆ ಮಾರ್ಗದ ಜಲ್ಲಿ ಕಲ್ಲುಗಳು ಭಾರೀ ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ಬೇಸ್‌ಗಳು ಲಯ ತಪ್ಪಿದ್ದವು. ಕೂಡಲೇ ಕಣಿವೆ ರೈಲ್ವೆ ಸ್ಟೇಷನ್‌ ಸಿಬ್ಬಂದಿ ರೈಲು ಚಾಲಕನಿಗೆ ಮಾಹಿತಿ ನೀಡಿ, ಸ್ವಲ್ಪ ದೂರದಲ್ಲಿ ಕೂಡಲೇ ರೈಲನ್ನು ನಿಲ್ಲಿಸಲಾಯಿತು. ಸ್ಥಳೀಯರ ಸಹಾಯದಿಂದ ಕಲ್ಲುಗಳನ್ನು ಸರಿಪಡಿಸುವ ಕೆಲಸ ಮುಗಿಸಿದ ಬಳಿಕ ಸುಮಾರು 30 ನಿಮಿಷಗಳ ಕಾಲ ತಡವಾಗಿ ರೈಲು ಪ್ರಯಾಣ ಮುಂದುವರಿಸಿತು.

ಚಿಕ್ಕಮಗಳೂರು - ಚಿತ್ರದುರ್ಗದ ಗಡಿ ಭಾಗದಲ್ಲಿರುವ ಹಡಗಲ್ಲು ಗ್ರಾಮದಲ್ಲಿ ಭಾರೀ ಮಳೆಗೆ ಗ್ರಾಮದ ಸುತ್ತಮುತ್ತಲಿರುವ ಅಡಿಕೆ, ತೆಂಗಿನ ತೋಟಗಳು ಹೊಲಗಳು ಜಲಾವೃತವಾಗಿವೆ. ಇದರಿಂದ ರೈತರಿಗೆ ಅಪಾರ ಹಾನಿ ಉಂಟಾಗಿದೆ.

--- ಬಾಕ್ಸ್‌ ---ಮಳೆಗೆ ಕೋಡಿ ಬಿದ್ದ 25 ಕೆರೆಗಳು: 56 ಮನೆಗಳ ಕುಸಿತ ಕಡೂರು: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮುಂದುವರಿದಿರುವ ಮಳೆ ಅಬ್ಬರ ದೀಪಾವಳಿ ಸಡಗರವನ್ನೂ ಮಂಕಾಗಿಸಿದೆ. ನಿರಂತರವಾಗಿ ರಾತ್ರಿಯಿಡೀ ಸುರಿಯುವ ಮಳೆಯಿಂದ ಹಳೆ ಮತ್ತು ಮಣ್ಣಿನ ಮನೆಗಳ ಕುಸಿತ ಭೀತಿ ಎದುರಾಗಿ ತೋಟಗಳು, ಗದ್ದೆಗಳು ಜಲಾವೃತಗೊಂಡರೆ, 30ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿವೆ.

ಕಳೆದ ಒಂದು ವಾರದಲ್ಲಿ ತಾಲೂಕಿನಲ್ಲಿ 56 ಮನೆಗಳು ಕುಸಿದಿವೆ. ಯಗಟಿ ಹೋಬಳಿ ಒಂದರಲ್ಲಿಯೇ 25 ಮನೆಗಳು ಕುಸಿದಿದ್ದು ಮಳೆ ನಡುವೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿ ಹೋಬಳಿಯಲ್ಲಿಯೂ 3-4 ಮನೆಗಳು ಕುಸಿದಿವೆ. ದೇವ ನೂರು ಸಮೀಪದ ಗಣಪತಿಹಳ್ಳಿ ಗ್ರಾಮದಲ್ಲಿ ನೂರಾರು ವರ್ಷ ಹಳೆ ಬಾವಿ ಕುಸಿದಿದ್ದು, ಸ್ಥಳಕ್ಕೆ ತಹಸೀಲ್ದಾರ್‌ ರ್ಪೂರ್ಣಿಮಾ ಮತ್ತು ಕಂದಾಯ ನಿರೀಕ್ಷಕ ರವಿಕುಮಾರ್‌ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಕಡೂರು ಪಟ್ಟಣಕ್ಕೆ ಹೊಂದಿಕೊಂಡು ತುರುವನಹಳ್ಳಿ ಹೋಗುವ ದಾರಿಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು ಸಮೀಪದ ಅಡಕೆ ತೋಟಗಳು ಜಲಾವೃತವಾಗಿವೆ. ಮಂಗಳವಾರ ಹಳ್ಳದಲ್ಲಿ ಕೊಚ್ಚಿಹೋದ ಎತ್ತುಗಳ ಮರಣೋತ್ತರ ವರದಿ ಪಡೆದು ತಹಸೀಲ್ದಾರರು ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಜಿಗಣೇಹಳ್ಳಿ ಸಮೀಪ, ಮಲ್ಲೇಶ್ವರ ರಸ್ತೆಯ ಕುಂತಿಹೊಳೆ, ತಂಗಲಿ ರಸ್ತೆ, ಯಗಟಿಪುರ ಮೊದಲಾದ ಕಡೆ ವೇದಾನದಿ ತುಂಬಿ ಹರಿದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ದೇವನೂರು ಕೆರೆ ಕೆಳ ಭಾಗದಲ್ಲಿ ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಸಾಕಷ್ಟು ಕಡೆ ಈರುಳ್ಳಿ, ರಾಗಿ, ಜೋಳ ಮತ್ತು ಮೆಣಸಿನ ಸಸಿ, ಟೊಮೆಟೋ ಮೊದಲಾದ ಬೆಳೆಗಳಿಗೆ ನೀರು ನುಗ್ಗಿದೆ.ಮಳೆ ಪರಿಣಾಮವಾಗಿ ಅಡಕೆ ಕೊಯ್ಲಿಗೆ ತಡೆ ಉಂಟಾಗಿದ್ದು ಬೇಯಿಸಿದ ಅಡಕೆ ಒಣಗಿಸಲು ಸಮಸ್ಯೆಯಾಗುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಬೇಯಿಸಿದ ಅಡಕೆ ಮೇಲೆ ಶಿಲೀಂಧ್ರ ಬೆಳೆಯುವ ಸಾಧ್ಯತೆ ಇದೆ. ಯಗಟಿ ಬಳಿ ಹೋಚಿಹಳ್ಳಿ, ಯಳ್ಳಂಬಳಸೆ, ಸೀತಾಪುರ, ಮುಗಳಿಕಟ್ಟೆ, ಮಲ್ಲಿದೇವಿಹಳ್ಳಿ, ಸಿಂಗಟಗೆರೆ, ಮುತ್ತಾಣಿಗೆರೆ, ಕೆ.ಬಿದರೆ, ಜಿಗಣೇಹಳ್ಳಿ, ಜೋಡಿತಿಮ್ಮಾಪುರ, ಹುಲ್ಲೇಹಳ್ಳಿ, ಪಿಳ್ಳೇನಹಳ್ಳಿ, ಹುಲಿಕೆರೆ, ಬಾಣೂರು ಭಾಗಗಳಲ್ಲಿ ಒಟ್ಟಾರೆ 56 ಮನೆಗಳು ಕುಸಿದಿವೆ. ನೂರಾರು ಎಕರೆ ಜಮೀನು ಮತ್ತು ತೋಟಗಳು ಜಲಾವೃತಗೊಂಡಿವೆ.ಹೊಸ ಮದಗದಕೆರೆ, ಹಳೆ ಮದಗದಕೆರೆ, ದೊಡ್ಡಬುಕ್ಕಸಾಗರ, ಚಿಕ್ಕಂಗಳ, ಕಡೂರು ಸಂತೆಕೆರೆ, ಬೀರೂರು ದೇವನಕೆರೆ, ಹಿರಿಯಂಗಳ ಕೆರೆ, ಬಾಕಿನಕೆರೆ, ತಂಗಲಿ ಊರ ಮುಂದಿನ ಕೆರೆ, ಚಿಕ್ಕಪಟ್ಟಣಗೆರೆ ಕೆರೆ, ಎಂ.ಕೋಡಿಹಳ್ಳಿ ಕೆರೆ, ಹಿರೆನಲ್ಲೂರು, ಕುಕ್ಕಸಮುದ್ರ, ಚೌಳ ಹಿರಿಯೂರು ಊರ ಮುಂದಿನ ಕೆರೆ, ಯಳ್ಳಂಬಳಸೆ, ಕೆ.ಬಿದರೆ, ಗರ್ಜೆ, ಅಣ್ನೇಗೆರೆ, ಗರುಗದಹಳ್ಳಿ, ಯಗಟಿ, ಅಯ್ಯನಕೆರೆ, ಬ್ರಹ್ಮಸಮುದ್ರ, ದೇವನೂರು ದೊಡ್ಡಕೆರೆಗಳು ಮೈದುಂಬಿ ಕೋಡಿ ಬಿದ್ದಿವೆ.23 ಕೆಡಿಆರ್‌ 1ದೇವನೂರು ಸಮೀಪದ ಗಣಪತಿಹಳ್ಳಿ ಗ್ರಾಮದಲ್ಲಿ ನೂರಾರು ವರ್ಷ ಹಳೆ ಬಾವಿ ಕುಸಿದಿದ್ದು, ಸ್ಥಳಕ್ಕೆ ತಹಸೀಲ್ದಾರ್‌ ರ್ಪೂರ್ಣಿಮಾ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

-- 23 ಕೆಡಿಆರ್‌ 2ಭಾರೀ ಮಳೆಗೆ ಕಡೂರು ತಾಲೂಕಿನ ಹಡಗಲ್ಲು ಗ್ರಾಮದ ತೋಟಗಳು ಹಾಗೂ ಇತರೆ ಪ್ರದೇಶ ಜಲಾವೃತವಾಗಿರುವುದು.