ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅತಿಯಾದ ಶೀತ ಗಾಳಿ ಸಹಿತ ಮಳೆಯಿಂದ ಕಾಫಿ ತೋಟಗಳಲ್ಲಿ ಹಾನಿಯಾಗಿದ್ದು, ಕೂಡಲೇ ಸರ್ಕಾರ ಧಾವಿಸಿ ಸಹಾಯಧನ ಕೊಡಬೇಕಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಉಪಾಧ್ಯಕ್ಷ ಬಿ.ಎಂ. ನಾಗರಾಜ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ೨೦೨೫ರ ಮೇ ಮತ್ತು ಜೂನ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಅತಿಯಾದ ಮಳೆಯಿಂದ ಕಾಫಿ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ ಫಸಲು ನಷ್ಟ ಉಂಟಾಗಿತ್ತು. ಇದರ ಬಗ್ಗೆ ಕಾಫಿ ಮಂಡಳಿಯ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿರುತ್ತಾರೆ. ತದನಂತರ ಮಳೆಯು ನಿರಂತರವಾಗಿ ಮುಂದುವರಿದು ಕಳೆದ ಒಂದು ವಾರದಿಂದ ಶೀತ, ಗಾಳಿ ವಾತಾವರಣದಿಂದ ಕೂಡಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಕಾಫಿ ನಷ್ಟದ ಪ್ರಮಾಣ ಸಮೀಕ್ಷೆ ನಡೆಸಿದ ನಂತರ ನಿರಂತರ ಮಳೆಯ ಮುಂದುವರೆಯುವಿಕೆಯಿಂದ ಇದೀಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯಲ್ಲಿ ನಷ್ಟ ಉಂಟಾಗಿದೆ ಎಂದರು.ಕಾಫಿ ಜೊತೆಗೆ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಳುಮೆಣಸು ಮತ್ತು ಅಡಿಕೆ ಬೆಳೆಯಲ್ಲಿ ತೀವ್ರತರನಾಗಿ ಕೊಳೆರೋಗ ಕಂಡುಬಂದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಜೊತೆಗೆ ಕಾಳುಮೆಣಸು ಬಳ್ಳಿಗಳು ಸಹ ರೋಗಕ್ಕೆ ತುತ್ತಾಗಿವೆ. ಆದ್ದರಿಂದ ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸುತ್ತೇವೆ. ಕಂದಾಯ ಇಲಾಖೆ ಮತ್ತು ಕಾಫಿ ಮಂಡಳಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಅತಿ ಶೀಘ್ರದಲ್ಲಿ ಕಾಫಿ ತೋಟಗಳಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಿ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ. ಸರ್ಕಾರವು ಕೂಡ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಂಡು ಅಧಿಕಾರಿಗಳಿಂದ ವರದಿ ಪಡೆದು ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ರಾಷ್ಟ್ರೀಯ ವಿಪತ್ತು ಯೋಜನೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಯೋಜನೆ (ಎಸ್‌ಡಿಆರ್‌ಎಫ್)ಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.ಮರಗಿಡಗಳ ಆಶ್ರಯದಲ್ಲಿ ಬೆಳೆಯುವ ಕಾಫಿ ತೋಟಗಳಲ್ಲಿ ಮರಗಳ ಎಲೆಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಭೂಮಿಗೆ ದೊರೆಯುತ್ತಿದ್ದು, ಇದರ ಜೊತೆಗೆ ಕಾಫಿ ತೋಟಗಳಲ್ಲಿ ರಸಗೊಬ್ಬರ ಬಳಕೆ ಅತಿಮುಖ್ಯವಾಗಿದೆ. ಕಾಫಿ ತೋಟಗಳಲ್ಲಿ ಸಿಂಪಡಣೆಯ ಮೂಲಕ ರಸಗೊಬ್ಬರ ಪೂರೈಕೆ ಕಷ್ಟಸಾಧ್ಯವಾಗಿದ್ದು, ಬುಡಕ್ಕೆ ರಸಗೊಬ್ಬರ ಹಾಕುವುದು ಅನಿವಾರ್ಯವಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಯೂರಿಯಾ ಗೊಬ್ಬರವನ್ನು ಸರ್ವೆ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿದ್ದು, ಈ ಸಾಲಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿ ಯೂರಿಯಾ ಗೊಬ್ಬರವನ್ನು ದೊರಕಿಸಿಕೊಡಬೇಕಾಗಿ ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗ್ರೋಯರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಸಂಘಟನಾ ಕಾರ್ಯದರ್ಶಿ ಬಿ.ಜಿ. ಯತೀಶ್, ಎಚ್.ಡಿ.ಪಿ.ಎ. ಅಧ್ಯಕ್ಷ ಎ.ಎಸ್. ಪರಮೇಶ್, ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್ ಗಂಗಾಧರ್, ಲೋಕೇಶ್ ಇತರರು ಉಪಸ್ಥಿತರಿದ್ದರು.