ಸಾರಾಂಶ
ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಉಂಟಾಗಿರುವ ಹಾನಿಯ ಸಮೀಕ್ಷೆ ನಡೆಸಲು ಕೊಡಗು ಬೆಳೆಗಾರ ಒಕ್ಕೂಟ ಮನವಿ ಮಾಡಿದ ಹಿನ್ನೆಲೆ ಭಾರತೀಯ ಕಾಫಿ ಮಂಡಳಿಯಿಂದ ಕಾಫಿ ಬೆಳೆ ನಷ್ಟದ ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀಮಂಗಲಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಉಂಟಾಗಿರುವ ಹಾನಿಯ ಸಮೀಕ್ಷೆ ನಡೆಸಲು ಕೊಡಗು ಬೆಳೆಗಾರ ಒಕ್ಕೂಟ ಮನವಿ ಮಾಡಿದ ಹಿನ್ನೆಲೆ ಭಾರತೀಯ ಕಾಫಿ ಮಂಡಳಿಯಿಂದ ಕಾಫಿ ಬೆಳೆ ನಷ್ಟದ ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಕೊಡಗು ಬೆಳೆಗಾರ ಒಕ್ಕೂಟದ ನಿಯೋಗ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿ ವೆಂಕಟರಾಜ ಅವರನ್ನು ಭೇಟಿ ಮಾಡಿ ಬೆಳೆ ಹಾನಿಯ ಸಮೀಕ್ಷೆ ನಡೆಸಲು ಮನವಿ ಮಾಡಿತ್ತು. ತ್ವರಿತವಾಗಿ ಸಮೀಕ್ಷೆ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯ ವಿವಿಧ ಅಧಿಕಾರಿಗಳ ತಂಡ ಕಾಫಿ ತೋಟಗಳಿಗೆ ತೆರಳಿ ಕಾಫಿ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ಕೈಗೊಂಡಿದೆ. ಮಂಗಳವಾರ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಗೇರಿ, ಹೈಸೊಡ್ಲೂರು ವ್ಯಾಪ್ತಿಯಲ್ಲಿ ಮತ್ತು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು, ಬಾಡಗರಕೇರಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಯಿತು.ಸಮೀಕ್ಷೆಯಲ್ಲಿ ಕಾಫಿ ಮಂಡಳಿಯ ಶ್ರೀಮಂಗಲ ವಿಭಾಗದ ಜೆ.ಎಲ್.ಓ. ಸುನಿಲ್ ಕುಮಾರ್, ಎ.ಇ.ಓ. ಹಫೀದಾ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಮಂಜುನಾಥ್ ಭಾಗವಹಿಸಿದ್ದರು.ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸ್ಥಳೀಯ ಬೆಳೆಗಾರರಾದ ಬಲ್ಯಮೀದೇರಿರ ಪೊನ್ನಪ್ಪ, ಶರಣ್ ಚಂಗಪ್ಪ, ಸಂಪತ್, ಅಣ್ಣೀರ ಸುಬ್ಬಯ್ಯ ಹಾಜರಿದ್ದರು.