ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಲ್ಲಿ ಜನವರಿಯಲ್ಲಿ ವಾರಗಳ ಕಾಲ ಸುರಿದ ಅಕಾಲಿಕ ಮಳೆಯಿಂದ ಕಾಫಿ ಫಸಲು ವ್ಯಾಪಕವಾಗಿ ನಷ್ಟವಾಗಿರುವ ಬಗ್ಗೆ ತಕ್ಷಣದಿಂದಲೇ ಕಾಫಿ ಮಂಡಳಿಯಿಂದ ನಷ್ಟ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಸೋಮವಾರದಿಂದ ಕಾಫಿ ಮಂಡಳಿ ಬೆಳೆ ನಷ್ಟ ಸಮೀಕ್ಷೆ ಆರಂಭಿಸಲಿದೆ ಎಂದು ಕಾಫಿ ಮಂಡಳಿ ಮೂಲಗಳು ತಿಳಿಸಿವೆ.ಕೊಡಗು ಬೆಳೆಗಾರ ಒಕ್ಕೂಟದ ನಿಯೋಗ ಶಾಸಕರನ್ನು ವಿರಾಜಪೇಟೆಯಲ್ಲಿ ಭೇಟಿ ಮಾಡಿ, ಅಕಾಲಿಕ ಮಳೆಯಿಂದ ಉಂಟಾದ ಅಪಾರ ನಷ್ಟದ ಬಗ್ಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡಿದ ಬೆನ್ನಲ್ಲೇ ತಕ್ಷಣದಿಂದಲೇ ಕಾಫಿ ಬೆಳೆ ನಷ್ಟದ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.ಕಾಫಿಯು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ ಅಡಿಯಲ್ಲಿ ಬರುತ್ತಿದ್ದು, ಅಕಾಲಿಕ ಮಳೆಯಿಂದ ಉಂಟಾಗಿರುವ ಕಾಫಿ ಬೆಳೆಗಾರರ ಸಂಕಷ್ಟವನ್ನು ಪರಿಗಣನೆ ಮಾಡಬೇಕಾಗಿದೆ ಎಂದು ಪೊನ್ನಣ್ಣ ತಿಳಿಸಿದರು.ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ:
ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಸಹ ಕೊಡಗು ಬೆಳೆಗಾರ ಒಕ್ಕೂಟದ ನಿಯೋಗ ಪ್ರತ್ಯೇಕವಾಗಿ ಭೇಟಿ ಮಾಡಿ ಬೆಳೆ ನಷ್ಟದ ಬಗ್ಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ವೆಂಕಟರಾಜ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಷ್ಟದ ಸಮೀಕ್ಷೆಯನ್ನು ಕೈಗೊಳ್ಳಲು ಭಾರತೀಯ ಕಾಫಿ ಮಂಡಳಿಗೆ ಸೂಚಿಸುವುದಾಗಿ ತಿಳಿಸಿದರು.ಕಳೆದ ಮಳೆಗಾಲದಲ್ಲಿ ಕೊಳೆರೋಗಕ್ಕೆ ತುತ್ತಾದ ಕಾಫಿ ಬೆಳೆಯ ನಷ್ಟದ ಸಮೀಕ್ಷೆಯನ್ನು ನಡೆಸಲು ಕಾಫಿ ಮಂಡಳಿಗೆ ಸೂಚಿಸಲಾಗಿತ್ತು ಎಂದು ತಿಳಿಸಿದ ಅವರು ಇದೀಗ ಸುರಿದಿರುವ ಅಕಾಲಿಕ ಮಳೆಯಿಂದ ಉಂಟಾಗಿರುವ ನಷ್ಟದ ಸಮೀಕ್ಷೆಯನ್ನು ಕೈಗೊಂಡು ವರದಿ ಸಲ್ಲಿಸಲು ಸೂಚಿಸುವುದಾಗಿ ಭರವಸೆ ನೀಡಿದರು.ಪರಿಹಾರ ಪರಿಷ್ಕರಣೆಗೆ ಮನವಿ:
ಕಾಫಿ ಬೆಳೆ ನಷ್ಟಕ್ಕೆ ಎನ್.ಡಿ.ಆರ್.ಎಫ್. ಮಾನದಂಡ ಮೂಲಕ ನೀಡುವ ಪರಿಹಾರವನ್ನು ದಶಕಗಳಿಂದ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ 2020ರಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಅಧ್ಯಯನ ತಂಡ ಆಗಮಿಸಿದ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟ ನೀಡಿದ ಮನವಿಗೆ ಸ್ಪಂದಿಸಿ ಈಗ ಇರುವ ಹೆಕ್ಟೇರಿಗೆ 18 ಸಾವಿರ ರು. ಮೊತ್ತವನ್ನು 50 ಸಾವಿರಕ್ಕೆ ಪರಿಸ್ಕರಣೆ ಮಾಡಿ, ಈಗ ಇರುವ 2 ಹೆಕ್ಟೇರ್ ಗರಿಷ್ಠ ಮಿತಿಯನ್ನು 5 ಹೆಕ್ಟೇರಿಗೆ ಹೆಚ್ಚಿಸಲು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಇದನ್ನು ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಗಮನ ಸೆಳೆಯಲಾಯಿತು.ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಅವರಿಗೂ ಗೋಣಿಕೊಪ್ಪ ಕಾಫಿ ಮಂಡಳಿಯ ಉಪನಿರ್ದೇಶಕರ ಮೂಲಕ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಮೇಲೆ ನೀಡಿದ ಮನವಿಯಂತೆ ಸೋಮವಾರದಿಂದ ಬೆಳೆ ನಷ್ಟ ಸಮೀಕ್ಷೆಯನ್ನು ಕಾಫಿ ಮಂಡಳಿ ಆರಂಭಿಸಲಿದೆ ಎಂದು ಕಾಫಿ ಮಂಡಳಿ ಮೂಲಗಳು ತಿಳಿಸಿವೆ.ನಿಯೋಗದಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಸದಸ್ಯರಾದ ಕೋಳೆರ ಭಾರತಿ, ಬಲ್ಯಮೀದೇರೀರ ಶರಣ್ ಚಂಗಪ್ಪ, ಬಲ್ಯಮೀದೇರೀರ ಸಂಪತ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರೀರ ನವೀನ್ ಹಾಜರಿದ್ದರು.