ಬೆಳೆಹಾನಿ ಪರಿಹಾರ ನೀಡಲು ಕಾಫಿ ಬೆಳೆಗಾರರ ಸಂಘ ಒತ್ತಾಯ

| Published : Aug 26 2024, 01:35 AM IST

ಸಾರಾಂಶ

ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಗೆ ಕಾಫಿ ಕಾಳು ಮೆಣಸು ಫಸಲು ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗಿದ್ದು ಸರ್ಕಾರ ಸೂಕ್ತ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ.

ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು ಫಸಲನ್ನು ರೈತರು ನಂಬಿಕೊಂಡಿದ್ದಾರೆ. ಆದರೆ ಪ್ರಸಕ್ತ ವರ್ಷ ಅತೀವೃಷ್ಟಿ, ಅನಾವೃಷ್ಟಿಯಿಂದ ಶೇ.70ರಿಂದ 80ರಷ್ಟು ಫಸಲು ಹಾನಿಯಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರು. ಗಳ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ. ಎಂ. ಮೋಹನ್ ಬೋಪಣ್ಣ ಹೇಳಿದರು.

2022- 23ನೇ ಸಾಲಿನಲ್ಲಿ ವಾಡಿಕೆ ಹಿಂಗಾರು ಮಳೆ ಕಡಿಮೆಯಾದ ಹಿನ್ನೆಲೆ ಬಿಸಿಲಿನ ತಾಪಕ್ಕೆ ಅರೇಬಿಕಾ ಕಾಫಿ ಗಿಡಗಳು ಬಿಳಿಕಾಂಡಕೊರಕ ಕೀಟಬಾಧೆಯಿಂದ ನಾಶವಾದವು. ಮಾರ್ಚ್, ಏಪ್ರಿಲ್‍ನಲ್ಲಿ ಹೂ ಮಳೆ ಬರಲಿಲ್ಲ. ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದು ಬಿಸಿಲಿನ ತಾಪಕ್ಕೆ ಹೂ ಸುಟ್ಟುಹೋಗಿ ನಷ್ಟವಾಯಿತು. ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 70ರಷ್ಟು ಹೆಚ್ಚಿನ ಮಳೆಯಾಗಿ ಕಾಫಿ, ಕಾಳುಮೆಣಸು ಫಸಲು ಶೇ. 70 ರಷ್ಟು ಹಾನಿಯಾಗಿದೆ. ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ಬಳ್ಳಿಗಳು ನಾಶವಾಗಿವೆ. ಅರೇಬಿಕಾ ಕಾಫಿ ತೋಟಗಳು ರೋಗಪೀಡಿತವಾಗಿವೆ ಎಂದು ಹೇಳಿದರು.

ಕೇಂದ್ರ ಹಾಗು ರಾಜ್ಯಸರ್ಕಾರಕ್ಕೆ ಕಾಫಿ ವಿದೇಶಿ ವಿನಿಮಯದ ತೆರಿಗೆಯಿಂದ ಸಾವಿರಾರು ಕೋಟಿ ಆದಾಯ ಸಿಗುತ್ತಿದೆ. ಕೊಡಗಿನಲ್ಲಿ ಕಾಫಿ ಪುನಶ್ಚೇತನಕ್ಕೆ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ಸೌಲಭ್ಯಗಳು ಸಿಗದೇ ಈಗಾಗಲೇ ಕೊಡಗಿನ ಕಿತ್ತಳೆ ಅವಸಾನವಾಗಿದೆ. ಕಾಫಿ ಉದ್ದಿಮೆಗೆ ಸೌಲಭ್ಯ ನೀಡದಿದ್ದರೆ ಕೊಡಗಿನಲ್ಲಿ ಕಾಫಿ ಅವಸಾನದ ಅಂಚಿಗೆ ತಲುಪುವ ಆತಂಕವಿದೆ ಎಂದು ಎಚ್ಚರಿಕೆ ನೀಡಿದರು.

ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆಯಿಂದ ಸೋಮವಾರಪೇಟೆ ತಾಲೂಕಿನಾದ್ಯಂತ ಅಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಗ್ರಾಮವಾರು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕೃಷಿ ಮಂತ್ರಿಗಳಾದ ಶಿವರಾಜ್‍ಸಿಂಗ್ ಚೌಹಣ್, ಜಿಲ್ಲೆಯ ಶಾಸಕರಾದ ಮತ್ತು ಜಿಲ್ಲಾಧಿಕಾರಿಗಳು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ಎಂ. ಲವ, ಕೆ.ಪಿ.ಬಸಪ್ಪ, ಪದಾಧಿಕಾರಿಗಳಾದ ಅನಂತರಾಮ್, ಸೋಮಶೇಖರ್, ತಾಕೇರಿ ಪ್ರಕಾಶ್ ಇದ್ದರು.