ಚಿಕ್ಕಮಗಳೂರುಎಲ್ಲ ಸಂದರ್ಭದಲ್ಲಿ ಕಾಫಿ ಬೆಳೆಗಾರರೊಂದಿಗೆ ನಿಲ್ಲುತ್ತೇವೆ, ಜತೆಗೆ, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪರಿಹರಿಸುವ ಕೆಲಸ ಮಾಡಲಾಗುವುದು ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಎಲ್ಲ ಸಂದರ್ಭದಲ್ಲಿ ಕಾಫಿ ಬೆಳೆಗಾರರೊಂದಿಗೆ ನಿಲ್ಲುತ್ತೇವೆ, ಜತೆಗೆ, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪರಿಹರಿಸುವ ಕೆಲಸ ಮಾಡಲಾಗುವುದು ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.ಭಾನುವಾರ ನಗರದ ಎಐಟಿ ಸರ್ಕಲ್ ನಲ್ಲಿರುವ ಒಕ್ಕಲಿಗರ ಭವನದಲ್ಲಿ ಚಿಕ್ಕಮಗಳೂರು ಕಸಬಾ ಬೆಳೆಗಾರರ ಸಂಘ ಉದ್ಘಾಟಿಸಿ ಮಾತನಾಡಿದ ಅವರು,ಸರ್ಫೇಸಿ ಕಾಯ್ದೆಯಿಂದ ಬೆಳೆಗಾರರಿಗೆ ತೊಂದರೆ ಆಗಿರುವ ಹಿನ್ನೆಲೆಯಲ್ಲಿ ಐವರು ಸಂಸದರ ನಿಯೋಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿಗೆ ಕೊಂಡೊಯ್ಯಲಾಗಿತ್ತು. ಆಗ ಒಟಿಎಸ್ ಮೂಲಕ ಶೇ.3 ಬಡ್ಡಿ ದರದಲ್ಲಿ 8 ತಿಂಗಳ ಅವಧಿಯಲ್ಲಿ ಸಾಲ ತೀರುವಳಿ ಮಾಡಿಕೊಳ್ಳಲು ಸಚಿವರು ಅವಕಾಶ ಮಾಡಿಕೊಟ್ಟರು ಎಂದರು. ದೇಶದ ಒಟ್ಟು 12,500 ಸುಸ್ತಿದಾರ ಬೆಳೆಗಾರರ ಪಟ್ಟಿಯಲ್ಲಿ ಕರ್ನಾಟಕದ 9,500 ಬೆಳೆಗಾರರ ಪೈಕಿ ಬಹುತೇಕ ಮಂದಿ ಒಟಿಎಸ್ ಮಾಡಿಕೊಂಡರು. ಇದರಿಂದ 10 ಲಕ್ಷ ರು.ನಿಂದ 1 ಕೋಟಿ ರು. ಹೆಚ್ಚು ರಿಯಾಯಿತಿ ಪಡೆದುಕೊಂಡಿದ್ದಾರೆ.
ಈಗಲೂ ಕೆಲವು ಮಂದಿ ಒಟಿಎಸ್ ಮಾಡಿಕೊಳ್ಳಲು ಆಸಕ್ತರಿದ್ದಾರೆ ಎಂದು ಹೇಳಿದರು.ಸುಮಾರು 20 ವರ್ಷಗಳ ಹಿಂದೆ ಸರ್ಫೇಸಿ ಕಾಯ್ದೆ ಬಂದ ನಂತರ ಬೆಳೆಗಾರರಿಗೆ ತೊಂದರೆ ಆಗುತ್ತಿರುವ ಕಾರಣ ಕಾಯ್ದೆ ಹಿಂದಕ್ಕೆ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಇದೆ. ಈ ಬಗ್ಗೆಯೂ ಕೇಂದ್ರ ವಾಣಿಜ್ಯ ಸಚಿವರು ಮತ್ತು ಹಣಕಾಸು ಸಚಿವರಲ್ಲಿಗೆ ನಿಯೋಗ ಕೊಂಡೊಯ್ದು ಚರ್ಚಿಸಿದ್ದೇವೆ. ಸರ್ಫೇಸಿ ಕಾಯ್ದೆ ತೆಗೆಯವುದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ಸದ್ಯಕ್ಕೆ ಆನ್‌ಲೈನ್ ಹರಾಜನ್ನು ಮೊದಲು ರದ್ದು ಪಡಿಸಿ ನಂತರ ಕಾಯ್ದೆ ತಿದ್ದುಪಡಿ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವಂತೆ ಸಲಹೆ ಮಾಡಿದ್ದೇವೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಸಹ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಒತ್ತಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಹರಾಜಿಗೆ ತಡೆಯಾಜ್ಞೆ ನೀಡಿದ್ದರು. ಈ ವಿಚಾರದಲ್ಲಿ ಮತ್ತೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಆನ್‌ಲೈನ್ ಹರಾಜು ಸಂಪೂರ್ಣ ನಿಲ್ಲಿಸಲು ಒತ್ತಡ ತರುತ್ತೇವೆ. ಅದರಲ್ಲಿ ಯಶಸ್ಸು ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಅರಣ್ಯ ಮತ್ತು ಕಂದಾಯ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಮುಖ್ಯಮಂತ್ರಿಗಳೇ ಹೇಳಿದರೂ ಅರಣ್ಯ ಇಲಾಖೆಯವರು ಸುಪ್ರೀಂಕೋರ್ಟ್, ಇತರೆ ಸಬೂಬು ಹೇಳುತ್ತಾರೆ ವಿನಃ ಸಮಸ್ಯೆ ಬಗೆಹರಿಸುವುದಿಲ್ಲ. ಅವರು ಮಾತ್ರ ಕಾಡು ಉಳಿಸುವವರು ಎಂದು ಕೊಂಡಿದ್ದಾರೆ. ಆದರೆ, ನಿಜವಾಗಿ ಪರಿಸರ ಮತ್ತು ಮರಗಳನ್ನು ಉಳಿಸುವವರು ನಮ್ಮಕಾಫಿ ಬೆಳೆಗಾರರು ಎಂದರು.ಬೆಳೆಗಾರರನ್ನು ಒತ್ತುವರಿದಾರರು ಎನ್ನುವುದನ್ನು ನಾವು ಒಪ್ಪುವುದಿಲ್ಲ. ಸಾಗುವಳಿದಾರರು ಎನ್ನುವುದು ಸರಿ ಎಂದು ಇಲಾಖೆ ಮುಂದೆ ಗಟ್ಟಿಯಾದ ಧ್ವನಿಯಲ್ಲಿ ನಾವು ಹೇಳಿದ್ದೇವೆ ಎಂದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಫಿ ಬೆಳೆಗಾರರ ಮುಂದೆ ಹಲವಾರು ಸವಾಲುಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಲಾಭದಾಯಕವಾಗಿ ಉಳಿಯಬೇಕಿದೆ. ಕಾರ್ಮಿಕರ ಶೋಷಣೆಯನ್ನು ಬೆಳೆಗಾರರು ಎಂದಿಗೂ ಮಾಡಿಲ್ಲ. ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಕನಿಷ್ಠ ಕೂಲಿಗಿಂತ ಹೆಚ್ಚು ವೇತನ ಸಿಗುವ ಕ್ಷೇತ್ರ ಇದ್ದರೆ ಅದು ಕಾಫಿತೋಟ. ಸಹಬಾಳ್ವೆ ಮೇಲೆ ನಂಬಿಕೆ ಇಟ್ಟವರು ಬೆಳೆಗಾರರು, ಆದರೂ ಎಲ್ಲಾ ಮೂಲ ಸೌಕರ್ಯ ಕೊಟ್ಟ ನಂತರವೂ ಇಂದು ನಮ್ಮ ಕೂಲಿ ಲೈನ್‌ಗಳು ಖಾಲಿ ಬಿದ್ದಿವೆ ಎಂದು ವಿಷಾಧಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಮಾತನಾಡಿದರು.
ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷ ಐ.ಎಂ. ಮಿಥುನ್, ಕೆಜಿಎಫ್ ಅಧ್ಯಕ್ಷ ಹಳಸೇ ಶಿವಣ್ಣ, ಬೆಳೆಗಾರರ ಸಂಘದ ಮುಖಂಡರಾದ ರತೀಶ್ ಕುಮಾರ್, ಲಿಂಗಪ್ಪಗೌಡ, ಮಹೇಶ್‌ಗೌಡ, ಉಮೇಶ್‌ಚಂದ್ರ, ಸತೀಶ್. ನೂತನ ಉಪಾಧ್ಯಕ್ಷ ನಿತಿನ್ ರವಿಶಂಕರ್, ಕಾರ್ಯದರ್ಶಿ ಪ್ರದೀಪ್, ಸಹಕಾರ್ಯದರ್ಶಿ ಆಕಾಶ್, ಖಜಾಂಚಿ ಸುಮಂತ್, ಕೆ.ಕೆ. ಮನುಕುಮಾರ್ ಇದ್ದರು.