ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಫಿ ಕೃಷಿಯ ನಡುವೆ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು ಎಂದು ಚೆಟ್ಟಳ್ಳಿಯ ಹಣ್ಣಿನ ತಳಿಗಳ ವಿಜ್ಞಾನಿ ಮುರಳೀಧರ್ ಹೇಳಿದರು.ಇಲ್ಲಿನ ಕೊಡವ ಸಮಾಜದಲ್ಲಿ ಯಲ್ ಡಿ ಸಿ ಕಂಪನಿ ಕುಶಾಲನಗರ ಮತ್ತು ಜಯ ಕಾಫಿ ನೆಲಜಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾಫಿಯಲ್ಲಿ ಉತ್ತಮ ಕೃಷಿ ಪದ್ಧತಿಗಳು ಮತ್ತು ಹಣ್ಣಿನ ಬೆಳೆಗಳ ವೈವಿಧ್ಯೀಕರಣ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾಗತಿಕವಾಗಿ ಕಾಫಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕೊಡಗಿನ ಕಾಫಿ ಉತ್ಕೃಷ್ಟವಾದುದು. ಕಾಫಿ ತೋಟದ ಒಳಗಡೆ ಹಣ್ಣಿನ ತಳಿಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು. ಬೆಣ್ಣೆ ಹಣ್ಣು, ರಾಂಬುಟನ್, ಲಿಚಿ, ಮ್ಯಾಂಗೋ ಸ್ಟೀನ್, ಕಿತ್ತಳೆ ಮುಂತಾದ ವೈವಿಧ್ಯಮಯ ತಳಿಗಳು ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿವೆ. ಉತ್ತಮ ಮಾರುಕಟ್ಟೆಯೂ ಹಣ್ಣಿನ ಬೆಳೆಗಳಿಗೆ ಲಭಿಸುತ್ತಿದೆ. ಅಂತರ ಬೆಳೆಯಾಗಿ ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ವೈವಿಧ್ಯತೆಯನ್ನು ಕಾಪಾಡಿಕೊಳ್ಳಬಹುದು ಎಂದ ಮುರಳೀಧರ್ಹಣ್ಣಿನ ಗಿಡಗಳ ಬೇಸಾಯ ಹಾಗೂ ಗಿಡಗಳ ಪೋಷಣೆ, ಗಿಡಗಳಿಗೆ ಬಾಧಿಸುವ ರೋಗಗಳ ನಿಯಂತ್ರಣ ಮತ್ತು ಹಣ್ಣಿನ ಗಿಡಗಳ ಬೆಳೆಸಲು ಸಿಗುವ
ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.ಕಾಫಿ ಬೆಳೆಗಾರ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಇಂದು ಜಾಗತಿಕವಾಗಿ ಉತ್ತಮ ಧಾರಣೆ ಲಭಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಬೆಳೆಗಾರರು ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದಾರೆ. ತಾಪಮಾನದ ವೈಪರೀತ್ಯದಿಂದಾಗಿ ಕಾಫಿ ಬೆಳೆಗೆ ತೊಡಕಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಉನ್ನತ ಮಟ್ಟದ ಸಂಶೋಧನೆ ಆಗಬೇಕಿದೆ. ಕಾಫಿ ತೋಟಗಳಲ್ಲಿ ತೇವಾಂಶ ಉಳಿಸಿಕೊಳ್ಳುವ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೈತರು ಸಂಕಷ್ಟದಿಂದ ಹೊರಬರಲು ನೆರವಾಗಬೇಕು ಎಂದರು.
ಕುಶಾಲನಗರ ಎಲ್ ಡಿಸಿ ಕಂಪೆನಿಯ ತ್ರಿಭುವನ್ ಸಾತ್ವಿಕ್ ಮಾತನಾಡಿ, ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವುದು ಇಂದಿನ ಆದ್ಯತೆ ಆಗಬೇಕು ಕೀಟನಾಶಗಳನ್ನು ಅತಿ ಹೆಚ್ಚಾಗಿ ಬಳಸಬಾರದು .ರೈತರು ಮಣ್ಣಿನ ಪರೀಕ್ಷೆಯನ್ನು ಮಾಡಿ ಅಗತ್ಯವಿರುವ ಗೊಬ್ಬರಗಳ ಪೂರೈಕೆ ಮಾಡಬೇಕು ಎಂದರು. ಜಯ ಕಾಫಿ ನೆಲಜಿ, ಕಾಫಿ ಬೆಳೆಗಾರರೊಂದಿಗೆ ಹಾಗೂ ಕಂಪನಿಯೊಂದಿಗೆ ಉತ್ತಮ ಬಾಂಧವ್ಯ, ವ್ಯವಹಾರ ಹೊಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಜಿ ಗ್ರಾಮದ ಜಯ ಕಾಫಿ ಮಾಲೀಕ ಮಂಡಿರ ಜಯದೇವಯ್ಯ ವಹಿಸಿ ಮಾತನಾಡಿ, ನಮ್ಮೊಂದಿಗೆ ವ್ಯವಹರಿಸುವ ಕಾಫಿ ಬೆಳೆಗಾರರಿಗೆ ಉತ್ತಮ ಬೋನಸ್ ಅನ್ನು ನೀಡಿದ್ದು ಮುಂದೆಯೂ ಎಲ್ಲ ಬೆಳೆಗಾರರು ನಮ್ಮೊಂದಿಗೆ ವ್ಯವಹರಿಸುವಂತೆ ಮನವಿ ಮಾಡಿಕೊಂಡರು.
ತರಬೇತಿ ಕಾರ್ಯಕ್ರಮದಲ್ಲಿ ಜಯ ಕಾಫಿ ವ್ಯವಸ್ಥಾಪಕ ಮಂಡೀರ ಕಿಶೋರ್ ಮತ್ತು ಕಾಫಿ ಬೆಳೆಗಾರರು ಭಾಗವಹಿಸಿದ್ದರು. ಮಮತ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಯಕ್ಷಿತ್ ಸ್ವಾಗತಿಸಿ ವಂದಿಸಿದರು.