ಸಿ.ಟಿ. ರವಿ ವಿರುದ್ಧ ಹಾನಗಲ್ಲದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ

| Published : Dec 22 2024, 01:30 AM IST

ಸಿ.ಟಿ. ರವಿ ವಿರುದ್ಧ ಹಾನಗಲ್ಲದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿಯ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹಾನಗಲ್ಲಿನಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಹಾನಗಲ್ಲ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿಯ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಹಿನ್ನೆಲೆಯಲ್ಲಿ ಇಲ್ಲಿ ಶುಕ್ರವಾರ ರಾತ್ರಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಕನಕ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಲಾಯಿತು. ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಇಡೀ ಮಹಿಳಾ ಕುಲವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಮಹಿಳೆಯರಿಗೆ ಅಪಮಾನ ಮಾಡುವುದು, ಅಗೌರವದಿಂದ ನಡೆದುಕೊಳ್ಳುವುದು ಬಿಜೆಪಿಯ ಸಂಸ್ಕೃತಿ. ಬಿಜೆಪಿ ನಾಯಕರ ನಡವಳಿಕೆ ತಲೆ ತಗ್ಗಿಸುವಂತಿದೆ. ಸಿ.ಟಿ. ರವಿ ಅವರನ್ನು ಸಮರ್ಥಿಸಿ ಬಿಜೆಪಿ ನಾಯಕರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ? ಅವರ ಮನೆಗಳಲ್ಲಿ ಹೆಂಡತಿ, ಮಕ್ಕಳು ಈ ಕುರಿತು ಪ್ರಶ್ನಿಸಿದರೆ ಏನೆಂದು ಉತ್ತರಿಸುತ್ತಾರೆ? ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಪೂಜಾರ ಮಾತನಾಡಿ, ಮಾತೆತ್ತಿದರೆ ಧರ್ಮ, ದೇಶ ಎಂದು ಮಾತನಾಡುವ ಬಿಜೆಪಿ ಮುಖಂಡರ ವರ್ತನೆ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎನ್ನುವಂತಿದೆ. ಬಿಜೆಪಿಗರದ್ದು ಡೋಂಗಿ ದೇಶಭಕ್ತಿ. ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಸಿ.ಟಿ. ರವಿ ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೊಂದುಕೊಂಡಿರುವ ಶಾಪ ಬಿಜೆಪಿಗೆ ತಟ್ಟದೇ ಬಿಡದು ಎಂದು ವಾಗ್ದಾಳಿ ನಡೆಸಿದರು.

ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಅನಿತಾ ಶಿವೂರ, ಮಂಗಳಾ ಬೆಣ್ಣಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.