ಭಾರಿ ಮಳೆ, ಬಿರುಗಾಳಿಗೆ ಉದುರುತ್ತಿದೆ ಕಾಫಿ

| Published : Jul 09 2025, 12:25 AM IST

ಸಾರಾಂಶ

ಸಕಲೇಶಪುರ: ತಾಲೂಕಾದ್ಯಂತ ಆಷಾಢದ ಬಿರುಗಾಳಿ ಮಳೆಗೆ ಸಿಲುಕಿ ವಾಣಿಜ್ಯ ಬೆಳೆ ಕಾಫಿ ದರ ಸೇರಲಾರಂಭಿಸಿದೆ.

ಸಕಲೇಶಪುರ: ತಾಲೂಕಾದ್ಯಂತ ಆಷಾಢದ ಬಿರುಗಾಳಿ ಮಳೆಗೆ ಸಿಲುಕಿ ವಾಣಿಜ್ಯ ಬೆಳೆ ಕಾಫಿ ದರ ಸೇರಲಾರಂಭಿಸಿದೆ.

ಮೇ ಮಧ್ಯಭಾಗದಿಂದ ಆರಂಭವಾಗಿರುವ ಮುಂಗಾರು ಆರ್ಭಟ ಬಿಡುವಿಲ್ಲದಂತೆ ಮುಂದುವರಿದಿರುವುದರಿಂದ ಭೂಮಿ ಶೀತಪೀಡಿತಗೊಂಡಿದ್ದು ಬೆಳೆಗಳೆಲ್ಲ ಕೊಳೆಯಲಾರಂಭಿಸಿದೆ. ಸದ್ಯ ಬೆಳೆ ಉಳಿಸಿಕೊಳ್ಳಲು ರಾಸಾಯನಿಕ ಸಿಂಪಡಿಸಲು ಬೆಳೆಗಾರರು ತುದಿಗಾಲಿನಲ್ಲಿ ನಿಂತಿದ್ದರೂ ಮಳೆ ಬಿಡುವು ನೀಡದಿರುವುದು ಬೆಳೆಗಾರರನ್ನು ಕಂಗಾಲು ಮಾಡಿದೆ. ತೋಟಗಾರಿಕೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳ ಪ್ರಕಾರ ತಾಲೂಕಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆಗೆ ಸಾಕಷ್ಟು ಹಾನಿ ಸಂಭವಿಸಿದ್ದು ಮಳೆ ಇದೇ ರೀತಿ ಮುಂದುವರೆದರೆ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗುವುದು ಖಂಡಿತ ಎಂಬುದು ಅಧಿಕಾರಿಗಳ ಮಾತು.

ಸದ್ಯ ತಾಲೂಕಿನ ಹೆತ್ತೂರು, ಹಾನುಬಾಳು ಹೋಬಳಿ ಹಾಗೂ ಕಸಬಾ ಹೋಬಳಿಯ ಕೆಲವೆಡೆ ಮಳೆಗಾಳಿಗೆ ಸಿಲುಕಿ ಕಾಫಿ ಶೇ. ೧೫ರಿಂದ ೨೦ರಷ್ಟು ಪ್ರಮಾಣದಲ್ಲಿ ಉದುರಿದ್ದರೆ ಅಡಿಕೆ ಶೇ. ೫೦ರಷ್ಟು ಪ್ರಮಾಣದಲ್ಲಿ ಹಾನಿಗೀಡಾಗಿದೆ. ಹೀಚಾಗುತ್ತಿರುವ ಮೆಣಸಿನ ಗೆರೆಗಳು ಉದುರಲಾರಂಭಿಸಿದ್ದು, ಮಳೆ ಹೆಚ್ಚಾದರೆ ಹಾನಿಯ ಪ್ರಮಾಣ ಉಹಿಸುವುದು ಕಷ್ಟಕರ ಎನ್ನಲಾಗುತ್ತಿದೆ. ಹೆತ್ತೂರು ಹೋಬಳಿ ಪಶ್ಚಿಮಘಟ್ಟದಂಚಿನಲ್ಲಿರುವ ಕಾಫಿ ತೋಟಗಳಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಕಾಫಿಗಿಡದ ಎಲೆ ಸೇರಿದಂತೆ ಫಸಲು ನೆಲ ಸೇರಿದ್ದು ಕೇವಲ ಗಿಡದಲ್ಲಿ ಕಡ್ಡಿಗಳು ಮಾತ್ರ ಗೋಚರಿಸುತ್ತಿವೆ.

ಸದ್ಯ ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ತಾಲೂಕಿನ ಹಲವೆಡೆ ೨೬೦ರಿಂದ ೪೦೦ ಮೀ. ಮೀಟರ್‌ ಅಧಿಕ ಮಳೆಯಾಗಿದ್ದು ಜುಲೈ ಮಧ್ಯಭಾಗಕ್ಕೆ ಈ ಪರಿಯ ಮಳೆಯಾಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಇದುವರೆಗೆ ತಾಲೂಕಿನಲ್ಲಿ ಮಳೆ ಕೊರತೆ ಎದುರಾಗಿದ್ದು ವಾಡಿಕೆ ಮಳೆಗಾಗಿ ಜನರು ಕಾತರಿಸುತ್ತಿದ್ದರು. ಆದರೆ, ಈ ಬಾರಿ ಬೇಸಿಗೆ ಸವಿ ಜನರಿಗೆ ತಟ್ಟದಂತೆ ಮುಂಗಾರುಮಳೆ ಸುರಿಯುತ್ತಿರುವುದು ಜನರ ನಿದ್ರೆಗೆಡುವಂತೆ ಮಾಡಿದೆ. ಕಳೆದ ಬಾರಿ ಒಟ್ಟಾರೆ ಮಳೆಗಾಲದಲ್ಲಿ ಶೇ. ೭೧ರಷ್ಟು ಅಧಿಕ ಮಳೆಯಾಗಿದ್ದು ಈ ಮಳೆಗೆ ಮೆಣಸು ಹೇಳ ಹೆಸರಿಲ್ಲದಂತೆ ನೆಲ ಸೇರಿದ್ದರಿಂದ ಮೆಣಸಿನ ಬೆಳೆ ಶೇ. ೭೦ರಷ್ಟು ಕುಸಿತಗೊಂಡಿತ್ತು. ಆದರೆ, ಈ ಬಾರಿ ಜುಲೈ ಮೊದಲವಾರದ ಅಂತ್ಯಕ್ಕೆ ಒಟ್ಟಾರೆ ೧೬೭ರಷ್ಟು ಮಳೆಯಾಗಿರುವುದು ಮೆಣಸು ಹಾಗೂ ಅಡಿಕೆ ಫಸಲು ನಿರೀಕ್ಷಿಸುವುದು ಅಸಾಧ್ಯ ಎಂಬುದು ಬೆಳೆಗಾರರ ವಲಯದ ಮಾತುಗಳು.

ಮತ್ತಷ್ಟು ಮಳೆ:

ಈಗಾಗಲೇ ಮಳೆಯಿಂದಾಗಿ ತಾಲೂಕಿನ ಹಲವೆಡೆ ಅಂತರ್ಜಲ ಉಕ್ಕಲಾರಂಭಿಸಿದ್ದರೆ, ಇಡೀ ಭೂಮಿ ಶೀತಪೀಡಿತಗೊಂಡಿದೆ. ಇದರಿಂದಾಗಿ ಮಳೆ ಬೀಡುವು ನೀಡಿದರೆ ಸಾಕು ಎಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ. ಆದರೆ ಹವಮಾನ ಇಲಾಖೆಯ ವರದಿ ಪ್ರಕಾರ ಜುಲೈ ೧೫ರಿಂದ ಆಗಸ್ಟ್ ಮೊದಲವಾರದವರಗೆ ಭಾರಿ ಮಳೆಯಾಗಲಿದೆ ಎನ್ನಲಾಗುತ್ತಿದೆ. ಈ ಹವಮಾನ ಇಲಾಖೆಯ ವರದಿ ಕಂಡು ಬೆಳೆಗಾರರು ನಿಂತಲೇ ನಡುಗುವಂತೆ ಮಾಡಿದೆ.

ಆರಂಭವಾಗದ ನಾಟಿ:

ಸದ್ಯ ಬಿಡುವಿಲ್ಲದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಜುಲೈ ಮೊದಲು ಹಾಗೂ ಎರಡನೇ ವಾರದಲ್ಲಿ ಬಿರುಸುಗೊಳ್ಳುತ್ತಿದ್ದ ನಾಟಿ ಕಾರ್ಯ ಈ ಬಾರಿ ವಿಳಂಬವಾಗಿದ್ದು ಇದುವರೆಗೆ ತಾಲೂಕಿನಲ್ಲಿ ಕೈಬೆರಳೆಣಿಕೆಯ ರೈತರು ಮಾತ್ರ ನಾಟಿ ಕಾರ್ಯ ಮುಗಿಸಿದ್ದು ಆಗಸ್ಟ್ ಅಂತ್ಯದವರೆಗೂ ನಾಟಿ ಕಾರ್ಯ ಈ ವರ್ಷ ಮುಂದುವರಿಯಲಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾತು. ಮಳೆಯೊಂದಿಗೆ ಅಧಿಕ ಶೀತಾಂಶ ಇರುವ ಕಾರಣ ಭತ್ತದ ಮಡಿ ಸೊಗಸಾಗಿ ಬೆಳೆಯದಾಗಿದೆ ಎನ್ನಲಾಗುತ್ತಿದ್ದರೆ, ಕೆಲವೆಡೆ ಭತ್ತದ ಮಡಿಗಳಿಗೆ ನೀರು ಆವರಿಸಿ ಹಾನಿಗೀಡಾಗಿದೆ.

---------------------------------------------------------*ಹೇಳಿಕೆ

ಅತಿಯಾದ ಮಳೆಯ ಕಾರಣ ತಾಲೂಕಿನಲ್ಲಿ ಇನ್ನೂ ಭತ್ತದ ನಾಟಿ ಕಾರ್ಯ ಆರಂಭವಾಗಿಲ್ಲ. ಈ ಬಾರಿ ಆಗಸ್ಟ್ ಅಂತ್ಯದವರೆಗೂ ನಾಟಿ ಕಾರ್ಯ ಮುಂದುವರಿಯುವ ಸಾಧ್ಯತೆ ಇದ್ದು ಇದುವರೆಗೆ ತಾಲೂಕಿನಲ್ಲಿ ಶೇ. ೧೬೭ರಷ್ಟು ಅಧಿಕ ಮಳೆಯಾಗಿದೆ.

ಪ್ರಕಾಶ್‌ ಕುಮಾರ್‌, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ (8ಎಚ್ಎಸ್ಎನ್3ಎ )

ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಹಾಗೂ ಮೆಣಸಿನ ಬೆಳೆ ಸಹ ಅಧಿಕ ಶೀತಾಂಶದಿಂದ ಹಾನಿಗೀಡಾಗಿದ್ದು, ಮಳೆ ಮುಂದುವರಿದರೆ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.

- ಬಸವರಾಜ್. ಎಸ್‌ಎಲ್‌ಒ, ಕಾಫಿ ಮಂಡಳಿ (8ಎಚ್ಎಸ್ಎನ್3ಬಿ)