ಸಾರಾಂಶ
ಕೊಡಗು ಜಿಲ್ಲೆಯಲ್ಲಿ ನಿರಂತರ ಗಾಳಿ ಮಳೆಯಿಂದ ಉಂಟಾದ ಅತಿ ತೇವಾಂಶದಿಂದ ಕಾಫಿ ಫಸಲು ಕೊಳೆ ರೋಗಕ್ಕೆ ತುತ್ತಾಗಿ ಉದುರುತ್ತಿದ್ದು, ಕಾಫಿ ಮಂಡಳಿಯ ಎರಡು ಪ್ರತ್ಯೇಕ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕೊಡಗು ಜಿಲ್ಲೆಯಲ್ಲಿ ನಿರಂತರ ಗಾಳಿ ಮಳೆಯಿಂದ ಉಂಟಾದ ಅತಿ ತೇವಾಂಶದಿಂದ ಕಾಫಿ ಫಸಲು ಕೊಳೆ ರೋಗಕ್ಕೆ ತುತ್ತಾಗಿ ಉದುರುತ್ತಿದ್ದು, ಕಾಫಿ ಮಂಡಳಿಯ ಎರಡು ಪ್ರತ್ಯೇಕ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿತು.ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಹೈಸೊಡ್ಲೊರು, ಕೋಣಗೇರಿ, ಬಿರುನಾಣಿ, ತೆರಾಲು, ಪೊರಾಡು, ಬಾಡಗರಕೇರಿ, ಶ್ರೀಮಂಗಲ, ನೆಮ್ಮಲೆ, ಕುಮಟೂರು, ಕಾಕೂರು, ಟಿ. ಶೆಟ್ಟಿಗೇರಿ ಗ್ರಾಮಗಳ ತೋಟಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ರೋಗ ಹತೋಟಿಗೆ ಸಮಗ್ರ ನಿರ್ವಹಣೆಗೆ ಈ ಸಂದರ್ಭ ಸಲಹೆ ನೀಡಿದರು.ಕಾಫಿ ನಿರ್ವಹಣೆಯೊಂದಿಗೆ ತೋಟದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವುದು, ಕಾಫಿ ಗಿಡಗಳ ನೆತ್ತಿ ಬಿಡಿಸುವುದು, ರೋಗ ಪೀಡಿತ ಎಲೆ, ಕಾಫಿ ಮಣಿಗಳನ್ನು, ಎಲೆ ತರಗುಗಳನ್ನು ತೋಟದಿಂದ ದೂರಸರಿಸಲು ತಂಡ ಸೂಚಿಸಿದೆ.
ಎಕರೆಗೆ ಒಂದು ಚೀಲ ಯೂರಿಯಾ ಅಥವಾ ಎರಡು ಚೀಲ ಅಮೋನಿಯಂ ಸಲ್ಫೇಟ್ ಗೆ 25 ಕೆಜಿ ಪೊಟ್ಯಾಶ್ ಸೇರಿಸಿ ಹಾಕುವುದು. ಕೊಳೆ ರೋಗಕ್ಕೆ ಟೆಬುಕೋನ್ ಜೋಲ್ ಶೇ.38.39, 1 ಕೆ ಜಿ ಪೊಟ್ಯಾಶಿಯಮ್ ನೈಟ್ರೇಟ್ (13.0.45),50 ಎಂ.ಎಲ್. ಪ್ಲಾನೋಫಿಕ್ಸ್ ಸೇರಿಸಿ ಅಂಟು ದ್ರಾವಣದೊಂದಿಗೆ ಸಿಂಪಡಿಸಲು ಸಲಹೆ ನೀಡಲಾಗಿದೆ.ಬಾಳೆಹೊನ್ನೂರು ಕಾಫಿ ಮಂಡಳಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸುಧಾ, ಡಾ. ಮಧು, ಕಾಫಿ ಮಂಡಳಿ ಜೆ.ಎಲ್.ಒ. ಸುನಿಲ್ ಕುಮಾರ್, ಎ. ಜೆ. ಎಲ್. ಓ. ಹಫಿತಾ ಮತ್ತು ಬೆಳೆಗಾರರು ಹಾಜರಿದ್ದರು.