ಕಾಡಾನೆ ಹಾವಳಿ ತಪ್ಪಿಸುವಂತೆ ಕಾಫಿ ಬೆಳೆಗಾರರ ಪ್ರತಿಭಟನೆ
KannadaprabhaNewsNetwork | Published : Oct 26 2023, 01:00 AM IST
ಕಾಡಾನೆ ಹಾವಳಿ ತಪ್ಪಿಸುವಂತೆ ಕಾಫಿ ಬೆಳೆಗಾರರ ಪ್ರತಿಭಟನೆ
ಸಾರಾಂಶ
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಸುತ್ತಮುತ್ತ 22ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟಗಳನ್ನು ಧ್ವಂಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಂದಳ್ಳಿ ಗ್ರಾಮದಲ್ಲಿ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೇಲೂರು ಕಾಡಾನೆಗಳು ತೋಟಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ ಎಂದು ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ಧೂರಿ ಕುಮಾರ್ ಹೇಳಿದರು. ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಸುತ್ತಮುತ್ತ 22ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟಗಳನ್ನು ಧ್ವಂಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಂದಳ್ಳಿ ಗ್ರಾಮದಲ್ಲಿ ಕಾಫಿ ಬೆಳೆಗಾರರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಅತ್ತಿಂದಿತ್ತ ಓಡಿಸಿದರೆ ಮತ್ತೆ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡುತ್ತವೆ. ಬೆಳೆನಾಶಕ್ಕೆ ಸರ್ಕಾರ ಕೊಡಮಾಡುವ ಅಲ್ಪ ಮೊತ್ತದ ಹಣ ಸಾಕಾಗುವುದಿಲ್ಲ. ಸಾವಿರಾರು ರು.ಗಳನ್ನು ವ್ಯಯಮಾಡಿ ಫಸಲಿಗೆ ಬಂದ ಗಿಡಗಳು ಕಾಡಾನೆಗಳ ತುಳಿತಕ್ಕೆ ಸಿಲುಕಿ ನಾಶವಾಗುತ್ತಿವೆ. ಆದ್ದರಿಂದ ದಯಮಾಡಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರ ಬೆಳೆಗಾರರ ಕಷ್ಟವನ್ನು ಅರಿತು ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕೆಂದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಈ ವೇಳೆ ಡಿ.ಎಫ್.ಒ ಮೋಹನ್ ಕುಮಾರ್, ಆರ್.ಎಫ್.ಒ ವಿನಯ್ ಕುಮಾರ್, ಎ.ಸಿ.ಎಫ್ ಪ್ರಭು, ಭೋಗಮಲ್ಲೇಶ್, ಗೋವಿಂದ ಶೆಟ್ಟಿ, ಬಿ.ಪಿ ಸುರೇಶ್, ಬಿ.ಡಿ ಮದನ್, ಸುಮಂತ್, ಸತೀಶ್, ಹುಸ್ಕೂರು ಗಣೇಶ್, ವಿಕ್ರಂ, ಇನ್ನಿತರರು ಉಪಸ್ಥಿತರಿದ್ದರು.