ಕ್ಲೋನಲ್ ಕಸಿಯಿಂದ ಹೆಚ್ಚಲಿದೆ ಕಾಫಿ ಉತ್ಪಾದನೆ: ದಿನೇಶ್ ದೇವವೃಂದ

| Published : Jul 15 2025, 01:00 AM IST

ಸಾರಾಂಶ

ಚಿಕ್ಕಮಗಳೂರುರೋಬಸ್ಟಾ ಕಾಫಿಯಲ್ಲಿ ಉತ್ತಮ ತಂತ್ರಜ್ಞಾನವಾದ ಕ್ಲೋನಲ್ ಕಸಿ ವಿಧಾನದಿಂದ ಭವಿಷ್ಯದಲ್ಲಿ ಕಾಫಿ ಉತ್ಪಾದನೆ ಹೆಚ್ಚಿಸಲು ಸಮೃದ್ಧ ಅವಕಾಶವಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರೋಬಸ್ಟಾ ಕಾಫಿಯಲ್ಲಿ ಉತ್ತಮ ತಂತ್ರಜ್ಞಾನವಾದ ಕ್ಲೋನಲ್ ಕಸಿ ವಿಧಾನದಿಂದ ಭವಿಷ್ಯದಲ್ಲಿ ಕಾಫಿ ಉತ್ಪಾದನೆ ಹೆಚ್ಚಿಸಲು ಸಮೃದ್ಧ ಅವಕಾಶವಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.ಮೂಡಿಗೆರೆ (ಐಸಿಎಆರ್) ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರು ಕಾಫಿ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ರೋಬಸ್ಟಾ ಕಾಫಿಯಲ್ಲಿ ಕ್ಲೋನಲ್ ಸಸ್ಯಾಭಿವೃದ್ಧಿ ಹಾಗೂ ಕಾಫಿ ಕಸಿ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ತರಬೇತಿ ಕಾರ್ಯಾಗಾರ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಕಾಫಿಯಲ್ಲಿ ಉತ್ಪಾದಕತೆ ಮತ್ತು ಉತ್ಪಾದನೆ ಹೆಚ್ಚಿಸಲು ಕ್ಲೋನಲ್ ಸಸಿಗಳನ್ನು ನಾಟಿ ಮಾಡುವುದು ಅತ್ಯಂತ ಅವಶ್ಯಕ. ಹಳೆಯ ಅನುತ್ಪಾದಕ ತೋಟಗಳಲ್ಲಿ ಕಸಿ ಮಾಡುವುದರಿಂದ ಕೂಡ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೇಳಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮಾತನಾಡಿ, ಸಸ್ಯಮೂಲ ಸಂವರ್ಧನೆ ತಂತ್ರಜ್ಞಾನದಲ್ಲಿ ಗುಣ ಮಟ್ಟದ ಗಿಡಗಳು ಉತ್ಪತ್ತಿಯಾಗುವುದರಿಂದ ಹೆಚ್ಚಿನ ಫಸಲು ಅವಕಾಶವಾಗಲಿದೆ. ಕಾಫಿ ಬೀಜವನ್ನು ಸಸಿಯನ್ನಾಗಿ ಮಾರ್ಪಡಿಸುವುದಕ್ಕಿಂತಲೂ ಸಸ್ಯಮೂಲ ಬಳಸಿಕೊಂಡು ಉತ್ಕೃಷ್ಟ ತಳಿ ಪಡೆಯಬಹುದು ಎಂದರು.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಮಾತನಾಡಿ, ಹಳೆಯದಾದ ಅನುತ್ಪಾದಕ ಕಾಫಿಗಿಡಗಳಿಗೆ ಚಿಗುರು ಕಸಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.ತಾಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ಕಾಫಿ ತೋಟಗಳಲ್ಲಿ ಎಲ್ಲ ರೈತರು ನರ್ಸರಿ ಯನ್ನು ಮಾಡಿ ಗಿಡಗಳನ್ನು ಬೆಳೆಯುವುದಿಲ್ಲ. ಬದಲಾಗಿ ನರ್ಸರಿಗಳಿಂದ ಗಿಡಗಳನ್ನು ಖರೀದಿಸಿ ನಾಟಿ ಮಾಡುತ್ತಾರೆ. ಇದರಿಂದ ಅರೋಗ್ಯವಂತ ಗಿಡಗಳನ್ನು ಗುರುತಿಸಲಾಗದೇ ನಷ್ಟ ಹೊಂದಬಹುದು. ಈ ನಿಟ್ಟಿನಲ್ಲಿ ಕ್ಲೋನಲ್ ಸಸ್ಯಾಭಿವೃದ್ಧಿ ಹಾಗೂ ಕಾಫಿ ಕಸಿ ವಿಧಾನವನ್ನು ವಿಜ್ಞಾನಿಗಳು ಸಾಧ್ಯವಾದಷ್ಟು ರೈತರಿಗೆ ತಲುಪುವಂತೆ ಮಾಡಬೇಕು ಎಂದರು.ತರಬೇತಿ ನೇತೃತ್ವವಹಿಸಿದ್ದ ತೋಟಗಾರಿಕೆ ವಿಜ್ಞಾನಿ ಡಾ.ಸುರೇಶ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೋಬಸ್ಟಾ ಕಾಫಿಯಲ್ಲಿ ಕ್ಲೋನಲ್ ಸಸ್ಯಮೂಲ ಸಂವರ್ಧನೆ ಅಳವಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ವಾಗುತ್ತದೆ. ಸಸ್ಯಮೂಲ ಸಂವರ್ಧನೆ ವಿಧಾನದಲ್ಲಿ ರೈತರೇ ತಮ್ಮ ತೋಟಗಳಲ್ಲಿರುವ ಉತ್ತಮ ಗಿಡಗಳನ್ನು ಅಯ್ಕೆ ಮಾಡಿ ಕೊಂಡು ಸಸಿ ಉತ್ಪಾದಿಸುವುದರಿಂದ ಅನುಕೂಲ ಹೆಚ್ಚಾಗಿರುತ್ತದೆ. ಇದರಿಂದ ಗಿಡ ಖರೀದಿ ವೆಚ್ಚ ತಗ್ಗಿಸಬಹುದು ಎಂದು ಹೇಳಿದರು. ಬಾಳೆಹೊನ್ನೂರಿನ ಕೇಂದ್ರಿಯ ಕಾಫಿ ಸಂಶೋಧನಾ ಕೇಂದ್ರದ ಅನುವಂಶೀಯತೆ ವಿಭಾಗೀಯ ಮುಖ್ಯಸ್ಥೆ ಡಾ.ಜೀನಾ ದೇವಾಸಿಯಾ ಮತ್ತು ಡಾ.ದಿವ್ಯಾ ಕೆ.ದಾಸ್ ಪ್ರಾತ್ಯಕ್ಷಿಕೆಯೊಂದಿಗೆ ರೈತರಿಗೆ ತರಬೇತಿ ನೀಡಿದರು.ವಿಜ್ಞಾನಿ (ಸಸ್ಯ ಸಂರಕ್ಷಣೆ) ಡಾ.ಎಂ.ಎಚ್.ಸುಚಿತ್ರಕುಮಾರಿ, ತೋಟಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ.ವಿ.ಶ್ರೀನಿವಾಸ, ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಜಿ.ಎಂ.ಪ್ರಶಾಂತ, ಜಿ.ಎಂ.ಲಕ್ಷ್ಮಣಗೌಡ, ಗೌತಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಪೂರ್ಣೇಶ್, ಗೋಣಿಬೀಡು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಅರವಿಂದ ಭೂತನಕಾಡು ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಿಂದ ಸುಮಾರು 110 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

14 ಕೆಸಿಕೆಎಂ 3ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ರೋಬಸ್ಟಾ ಕಾಫಿಯಲ್ಲಿ ಕ್ಲೋನಲ್ ಸಸ್ಯಾಭಿವೃದ್ಧಿ ಹಾಗೂ ಕಾಫಿ ಕಸಿ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮಾತನಾಡಿದರು.