ನಗರದಲ್ಲಿ ನೆಗಡಿ, ಕೆಮ್ಮು ಜ್ವರ ಪೀಡಿತರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ವೈರಲ್ ಇನ್ಫ್ಲುಯೆನ್ಝಾ ಎಚ್3ಎನ್2 ರೂಪಾಂತರ ಲಕ್ಷಣ ಇದಾಗಿದ್ದು, ಎನ್-95 ಮಾಸ್ಕ್ ಬಳಕೆಗೆ ವೈದ್ಯರು ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನೆಗಡಿ, ಕೆಮ್ಮು ಜ್ವರ ಪೀಡಿತರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ವೈರಲ್ ಇನ್ಫ್ಲುಯೆನ್ಝಾ ಎಚ್3ಎನ್2 ರೂಪಾಂತರ ಲಕ್ಷಣ ಇದಾಗಿದ್ದು, ಎನ್-95 ಮಾಸ್ಕ್ ಬಳಕೆಗೆ ವೈದ್ಯರು ಸಲಹೆ ನೀಡಿದ್ದಾರೆ.ಇಳಿಮುಖವಾಗಿದ್ದ ಚಳಿ ಕಳೆದೊಂದು ವಾರದಿಂದ ಪುನಃ ಏರಿಕೆಯಾಗಿದೆ. ಈ ನಡುವೆ ಬಹುತೇಕರಲ್ಲಿ ಅನಾರೋಗ್ಯ ಕಾಡುತ್ತಿದೆ. ಸೋಂಕಿತ ಮೇಲ್ಮೈ ಸಂಪರ್ಕದಿಂದ ಅಂದರೆ ಉಸಿರಾಟ ಗಾಳಿ, ಕೆಮ್ಮು, ಸ್ವರ್ಶದಿಂದ ಈ ರೋಗವು ಹರಡುವ ಸಾಧ್ಯತೆ ಹೆಚ್ಚು. ಋತುಮಾನದ ಜ್ವರವು ಹರಡುತ್ತಿದ್ದು, ಸಾಮಾನ್ಯವಾಗಿ ಒಂದು ವಾರದೊಳಗೆ ಪರಿಹಾರವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಮಕ್ಕಳಲ್ಲಿ ಹೆಚ್ಚಾಗಿ ಈ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಜತೆಗೆ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಅಥವಾ ದೀರ್ಘಕಾಲದ ಕಾಯಿಲೆ ಹೊಂದಿರುವ ಜನರು ಸೇರಿದಂತೆ ಇತರ ರೋಗಿಗಳು ಇದರಿಂದ ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ.ಜ್ವರ ಬಂದವರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ ಅಥವಾ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ವಿಳಂಬ ಮಾಡಬೇಡಿ ಎಂದು ವೈದ್ಯರು ಹೇಳಿದ್ದಾರೆ. ಸರ್ಕಾರಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೋಹನ್ ರಾಜಣ್ಣ, ಸದ್ಯಕ್ಕೆ ಚಳಿ ಕಡಿಮೆ ಆಗುತ್ತಿದೆ. ಡಿಸೆಂಬರ್‌ನಲ್ಲಿ ಹೆಚ್ಚಿನ ಜನರಲ್ಲಿ ಆರೋಗ್ಯ ಸಮಸ್ಯೆ ಇತ್ತು. ಅದೀಗ ಕಡಿಮೆ ಆಗುತ್ತಿದೆ ಎಂದರು.ಹೆಚ್ಚಿನವರಲ್ಲಿ ಮೂರರಿಂದ ಐದು ದಿನಗಳಲ್ಲಿ ಜ್ವರ, ಕೆಮ್ಮು ಪರಿಹಾರವಾಗುತ್ತಿದೆ. ಆದರೆ ವಯಸ್ಸಾದ ರೋಗಿಗಳು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮತ್ತು ಇತರೆ ಕಾಯಿಲೆ ಹೊಂದಿರುವವರು ನ್ಯುಮೋನಿಯಾ ಸೇರಿ ಹೆಚ್ಚಿನ ಅಪಾಯವನ್ನು ಎದುರಿಸಬಹುದು. ನಾವು ಪ್ರಸ್ತುತ ವೈರಲ್ ಇನ್ಫ್ಲುಯೆನ್ಝಾ ಮತ್ತು ಇತರ ಸೋಂಕುಗಳ ಸುಮಾರು 20 ಪ್ರಕರಣ ನೋಡುತ್ತಿದ್ದೇವೆ. ಇದರಲ್ಲಿ ಎಚ್3ಎನ್2 ಸಾಮಾನ್ಯ ರೂಪಾಂತರವಾಗಿದೆ ಎಂದು ವೈದ್ಯರು ತಿಳಿಸಿದರು.
ಚಳಿಗಾಲದ ತಿಂಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.ಏಳು ವರ್ಷದ ಹಿಂದೆ ಎಚ್3ಎನ್2 ಗಂಭೀರ ಆರೋಗ್ಯ ಪರಿಣಾಮ ಉಂಟುಮಾಡಿತ್ತು. ಆದರೆ, ಇದರ ನಿರೋಧಕ ಶಕ್ತಿ ಈಗ ಬೆಳವಣಿಗೆ ಆಗಿರುವುದರಿಂದ ಜನ ಹೊಂದಿಕೊಂಡಿದ್ದಾರೆ. ಕಳೆದೊಂದು ತಿಂಗಳಲ್ಲಿ ಬಹುತೇಕರಲ್ಲಿ ಇದು ಬಂದಿದೆ ಎಂದು ಡಾ.ಪಲ್ಲೆತಿ ಶಿವಕಾರ್ತಿಕ ರೆಡ್ಡಿ ತಿಳಿಸಿದರು.
ಮಾಸ್ಕ್ ಧರಿಸಲು ಸಲಹೆಇದು ಋತುಮಾನದ ಜ್ವರದ ಜತೆಗೆ ವೈರಲ್ ಸೋಂಕು ಆಗಿದೆ. ಸೋಂಕಿತರು ಸೀನಿದಲ್ಲಿ ಸಮೀಪ ಇದ್ದವರಿಗೆ ಹರಡುತ್ತಿದೆ. ಹೀಗಾಗಿ ಎನ್-95 ಮಾಸ್ಕ್ ಧರಿಸಿ. ವಿಶೇಷವಾಗಿ ನಗರ ಸಂಚಾರ ಮಾಡುವಾಗ ತಪ್ಪದೆ ಈ ಮುಂಜಾಗ್ರತೆ ವಹಿಸಿ ಆಗಾಗ ಕೈ ತೊಳೆದುಕೊಳ್ಳಬೇಕು ಹಾಗೂ ಬಿಸಿ ನೀರು ಕುಡಿಯುವಂತೆ ಅವರು ತಿಳಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನವರಲ್ಲಿ ವೈರಲ್ ಇನ್ಫ್ಲುಯೆನ್ಝಾ ಎಚ್3ಎನ್2 ರೂಪಾಂತರ ಲಕ್ಷಣದ ಜ್ವರ ಕಾಣಿಸಿಕೊಳ್ಳುತ್ತಿದೆ. ಸಂಚರಿಸುವಾಗ ಮಾಸ್ಕ್ ಧರಿಸಿ, ನಿರ್ಲಕ್ಷಿಸದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.ಡಾ.ಪಲ್ಲೆತಿ ಶಿವಕಾರ್ತಿಕ ರೆಡ್ಡಿ
ಎಲೈಟ್ ಕೇರ್ ಕ್ಲಿನಿಕ್