ತಾಲೂಕಿನ ಹೆಗ್ಗೋಡು ಹೊನ್ನೇಸರದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಅತ್ಯುತ್ತಮ ರಾಷ್ಟ್ರೀಯ ಬ್ರ್ಯಾಂಡ್ ನಿರ್ಮಾಣ ಪ್ರಶಸ್ತಿ ಲಭಿಸಿದೆ.
ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಹೆಗ್ಗೋಡು ಹೊನ್ನೇಸರದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಅತ್ಯುತ್ತಮ ರಾಷ್ಟ್ರೀಯ ಬ್ರ್ಯಾಂಡ್ ನಿರ್ಮಾಣ ಪ್ರಶಸ್ತಿ ಲಭಿಸಿದೆ.ನವದೆಹಲಿಯ ಜನಪಥ್ನ ಹ್ಯಾಂಡ್ಲೂಮ್ ಹಾಟ್‌ನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ (ಎನ್ಎಚ್‌ಡಿಸಿ)ದ ೪೩ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕೇಂದ್ರ ಜವಳಿ ಖಾತೆ ಸಚಿವ ಗಿರಿರಾಜ್ ಸಿಂಗ್ ಈ ಪ್ರಶಸ್ತಿ ಪ್ರದಾನ ಮಾಡಿದರು. ಚರಕದ ಪರವಾಗಿ ಸಂಘದ ಸಿಇಒ ಟೆರೆನ್ಸ್ ಪೀಟರ್ ಪ್ರಶಸ್ತಿ ಸ್ವೀಕರಿಸಿದರು.
ಕೈಮಗ್ಗ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನಿರ್ಮಾಣ, ಮಾರುಕಟ್ಟೆ ವಿಸ್ತರಣೆ ಹಾಗೂ ನೇಕಾರರ ಸಬಲೀಕರಣದಲ್ಲಿ ಸಾಧನೆ ಮಾಡಿದ ಸಂಸ್ಥೆಗಳಿಗೆ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಇದು ಒಳಗೊಂಡಿದೆ.ಚರಕ ಮಹಿಳಾ ಸಂಘವು ಮಹಿಳಾ ನೇಕಾರರನ್ನು ಸಂಘಟಿಸಿ, ಕೈಮಗ್ಗ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿ ಗುರುತು ತಂದುಕೊಟ್ಟಿರುವುದು, ನೈಸರ್ಗಿಕ ಬಣ್ಣ ಬಳಕೆ, ಸುಸ್ಥಿರ ಉತ್ಪಾದನೆ ಹಾಗೂ ಮಾರುಕಟ್ಟೆ ವಿಸ್ತರಣೆಯಲ್ಲಿ ಮಾಡಿದ ಅನನ್ಯ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಂಸ್ಥೆಗೆ ಈ ಪ್ರಶಸ್ತಿ ದೊರಕಿರುವುದು ಕರ್ನಾಟಕದ ಕೈಮಗ್ಗ ಕ್ಷೇತ್ರಕ್ಕೆ ಹಾಗೂ ಸಾಗರ ಪ್ರದೇಶದ ಗ್ರಾಮೀಣ ಮಹಿಳಾ ಉದ್ಯಮಕ್ಕೆ ರಾಷ್ಟ್ರೀಯ ಮಟ್ಟದ ಹೆಮ್ಮೆಯ ಸಂಗತಿಯಾಗಿದೆ ಎಂದು ಸಿಇಒ ಟೆರೆನ್ಸ್ ಪೀಟರ್ ಪ್ರತಿಕ್ರಿಯಿಸಿದ್ದಾರೆ.