ಸುಜಾತಾ ಹಾಗೂ ಅವರ ಕುಟುಂಬದವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೇಶ್ವಾಪುರ ಇನಸ್ಪೆಕ್ಟರ್ ಕೆ.ಎಸ್. ಹಟ್ಟಿ ಪೊಲೀಸ್ ಬ್ಯಾಡ್ಜ್ ಹಾಕಿಕೊಂಡು ರೌಡಿಗಳಂತೆ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಬರಿ ಅಮಾನತು ಮಾಡದೇ ತಕ್ಷಣ ವಜಾಗೊಳಿಸಬೇಕು.

ಹುಬ್ಬಳ್ಳಿ:

ಸುಜಾತ ಹಂಡಿ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿರುವುದು ಕಾಂಗ್ರೆಸ್ ಆಯೋಜಿತ ಗೂಂಡಾಗಿರಿಯಾಗಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೀಡಿ ಸೂಕ್ತ ತನಿಖೆಗೆ ಒತ್ತಾಯಿಸುವುದಾಗಿ ಬಿಜೆಪಿ ರಾಜ್ಯ ಮಹಿಳಾ‌ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.

ಇಲ್ಲಿಯ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸುಜಾತಾ ಹಾಗೂ ಅವರ ಕುಟುಂಬದವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೇಶ್ವಾಪುರ ಇನಸ್ಪೆಕ್ಟರ್ ಕೆ.ಎಸ್. ಹಟ್ಟಿ ಪೊಲೀಸ್ ಬ್ಯಾಡ್ಜ್ ಹಾಕಿಕೊಂಡು ರೌಡಿಗಳಂತೆ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಬರಿ ಅಮಾನತು ಮಾಡದೇ ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಹಿಳೆಯರಿಗೆ ಸುರಕ್ಷತೆ ನೀಡಬೇಕಾದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ಆ ಮಹಿಳೆ ತಾನಾಗಿಯೇ ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಮಹಿಳೆಯರಿಗೆ ಕೊಡುವ ಸುರಕ್ಷತೆ ಇದೇನಾ? ಇಂತಹ ಪುಂಡರ‌ ಕೈಯಲ್ಲಿ ಕಾನೂನು ಸುವ್ಯವಸ್ಥೆ ನೀಡಿದ ಭಂಡ ಸರ್ಕಾರವಿದು ಎಂದು ಕಿಡಿಕಾರಿದರು.

ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಬಡವರ ಮನೆಗಳ ಕಬ್ಜಾ ಮಾಡುತ್ತಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ರಾಷ್ಟ್ರೀಯ ಮಹಿಳಾ‌ ಆಯೋಗ ತನಿಖೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಈ ಪ್ರಕರಣದಿಂದ ಜಾರಿಕೊಳ್ಳದೇ ಸಂತ್ರಸ್ತ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದರು.

ಸುಜಾತಾ ಹಂಡಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರೆ ಕಾನೂನು ಪ್ರಕಾರ ಕ್ರಮವಾಗಲಿ. ಪೊಲೀಸ್ ಇಲಾಖೆಯಿಂದ ಐದು ವಿಡಿಯೋಗಳಿವೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಘಟನೆ ಬಗ್ಗೆ ವರದಿ ನೀಡಲಾಗುವುದು. ಬಿಜೆಪಿ ಈ ಕುಟುಂಬದ ಜತೆ ಇರಲಿದ್ದು, ಸೂಕ್ತ ತನಿಖೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಾಜಿ ಶಾಸಕಿ ಸೀಮಾ ಮಸೂತಿ, ಮೇಯರ್ ಜ್ಯೋತಿ ಪಾಟೀಲ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡರ ಸೇರಿದಂತೆ ಹಲವರಿದ್ದರು.