ಶಿರಾ ಎಪಿಎಂಸಿಯಲ್ಲಿ 10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್

| Published : Feb 25 2025, 12:48 AM IST

ಸಾರಾಂಶ

ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿಸಿ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿಸಿ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ ಗೌಡ ಹೇಳಿದರು.

ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶಿರಾ ತಾಲೂಕಿನ ರೈತರ ಹಲವು ವರ್ಷಗಳ ಕನಸು ನನಸಾಗುತ್ತಿದ್ದು, ಕೋಲ್ಡ್ ಸ್ಟೋರೇಜ್ ನಿರ್ಮಾಣದಿಂದ ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿದ್ದು. ರೈತರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ. ಹಿಂದೆ ಎಪಿಎಂಸಿ ಚುನಾವಣೆಯ ಸಮಯದಲ್ಲಿ ಬಂದಕುಂಟೆ ಗ್ರಾಮದಲ್ಲಿ ಚುನಾವಣೆ ಪ್ರಚಾರದ ಸಮಯದಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇನೆ. ಶಾಸಕರ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದಾಗಿ ಕೋಲ್ಡ್ ಸ್ಟೋರೇಜ್ ಮಂಜೂರಾಗಿದೆ. ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್, ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಎಸ್.ರವಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹುಣಸೆ ಹಣ್ಣು ಬೆಳೆಯುತ್ತಿದ್ದು ಸೂಕ್ತ ಬೆಲೆ ದೊರೆಯದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಹಿಂದೂಪುರ, ಪುಂಗನೂರು ಭಾಗದಿಂದ ಬರುವ ವರ್ತಕರು ಕಡಿಮೆ ದರಕ್ಕೆ ಹುಣಸೆ ಹಣ್ಣು ಖರೀದಿ ಮಾಡುತ್ತಾರೆ. ಸ್ವಲ್ಪ ಹಣ ಕೊಟ್ಟು ಮುಂದಿನ ವಾರ ಉಳಿದ ಹಣ ಕೊಡುವುದಾಗಿ ಹೇಳಿ ಹೋಗುತ್ತಾರೆ. ಆದರೆ ಹಲವಾರು ಬಾರಿ ರೈತರಿಗೆ ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಹುಣಸೆ ಹಣ್ಣು ಬಹಳ ದಿನ ಸಂಗ್ರಹಿಸಲು ಸಾಧ್ಯವಾಗದ ಕಾರಣ ರೈತರು ಅವರು ಕೇಳಿದಷ್ಟಕ್ಕೆ ಕೊಡುವಂತಾಗಿದೆ. ಈಗ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗುವುದರಿಂದ ರೈತರು ತಾವು ಬೆಳೆದ ಹುಣಸೆ ಹಣ್ಣು ಅಲ್ಲಿ ಸಂಗ್ರಹಿಸಿಟ್ಟು ಬೆಲೆ ಬಂದಾಗ ಮಾರಾಟ ಮಾಡಬಹುದು. ಒಂದು ವೇಳೆ ಹಣಕಾಸಿನ ಸಮಸ್ಯೆ ಇದ್ದರೆ ಹುಣಸೆಹಣ್ಣು ಅಡಮಾನ ಇಟ್ಟು ಹಣ ಪಡೆದು ಮಾರಾಟ ಮಾಡಿದಾಗ ಸಾಲವನ್ನು ವಾಪಸ್ಸು ಕೊಡಬಹುದಾಗಿದೆ. ಇಲ್ಲಿ ಹುಣಸೆ, ಟಮೋಟಾ, ಮಾವು, ಹಲಸು ಸೇರಿದಂತೆ ತರಕಾರಿ, ಹಣ್ಣು, ಹೂವುಗಳನ್ನು ದೀರ್ಘಕಾಲ ಇಡಬಹುದಾಗಿದ್ದು ರೈತರಿಗೆ ಹೆಚ್ಚಿನ ಲಾಭವಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಮುಕುಂದಪ್ಪ, ನಗರಸಭೆ ಸದಸ್ಯ ಬಿ.ಎಂ.ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.