ಕೆಪೆಕ್ ವತಿಯಿಂದ ಹಲವೆಡೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಆದರೂ ಸಹ ಎಪಿಎಂಸಿ ಪ್ರಾಗಂಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಿರಲಿಲ್ಲ

ಕುಕನೂರು: ಪಟ್ಟಣದ ಎಪಿಎಂಸಿ ಪ್ರಾಗಂಣದಲ್ಲಿ ಉತ್ತರ ಕರ್ನಾಟಕ ಮಾದರಿಯಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಕೋಲ್ಡ್ ಸ್ಟೋರೇಜ್ ಸಿದ್ಧವಾಗಿದೆ.

2023-24 ನೇ ಸಾಲಿನ ಆರ್‌ಐಡಿಎಫ್‌ -29ರ ಯೋಜನೆಯಲ್ಲಿ ₹ 7 ಕೋಟಿ ವೆಚ್ಚದಲ್ಲಿ ಕುಕನೂರು ಪಟ್ಟಣದ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕೋಲ್ಡ್ ಸ್ಟೋರೇಜ್ ಮಂಜೂರಾಗಿದ್ದು. ಕೆಪೆಕ್ ವತಿಯಿಂದ ಹಲವೆಡೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಆದರೂ ಸಹ ಎಪಿಎಂಸಿ ಪ್ರಾಗಂಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಿರಲಿಲ್ಲ. 2023-24ನೇ ಸಾಲಿನ ಆರ್‌ಐಡಿಎಫ್‌-29ರ ಯೋಜನೆಯಲ್ಲಿ ವಿಜಯಪುರ ಹಾಗೂ ಕುಕನೂರಿನಲ್ಲಿ ಕೋಲ್ಟ್ ಸ್ಟೋರೇಜ್ ಮಂಜೂರಾಗಿದ್ದು, ಕುಕನೂರಿನ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿದೆ. ಸದ್ಯ ಉತ್ತರ ಕರ್ನಾಟಕದಲ್ಲಿ ರಾಯಚೂರು ಬಿಟ್ಟರೆ ಕುಕನೂರಿನಲ್ಲಿ ಮಾತ್ರ ಸರ್ಕಾರದ ಕೋಲ್ಡ್ ಸ್ಟೋರೇಜ್ ಇರುವುದು. ಮೇ.4 ರಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ.

ಬೆಲೆ ನಷ್ಟ ಆಗದಂತೆ ಅನುಕೂಲ:ಕೋಲ್ಡ್ ಸ್ಟೋರೇಜಿನಲ್ಲಿ ರೈತರು ತಾವು ಬೆಳೆಗಳನ್ನು ಸಂಗ್ರಹಿಸಿ ಇಡುವುದರಿಂದ ಮಾರುಕಟ್ಟೆಯಲ್ಲಿ ಬೆಳೆಗೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದು. ಇಲ್ಲದಿದ್ದರೆ ಅಗ್ಗದ ಬೆಲೆಗೆ ರೈತರು ತಮ್ಮ ಬೆಳೆ ಮಾರಾಟ ಮಾಡಬೇಕಾಗುತ್ತದೆ. ಬೆಳೆಯ ಬೆಲೆ ನಷ್ಟ ತಡೆಯಲು ಸಹ ಕೋಲ್ಡ್‌ ಸ್ಟೋರೇಜ್ ಅನುಕೂಲವಾಗಲಿದೆ.

ಶಾಸಕ ರಾಯರಡ್ಡಿ ಪ್ರಸ್ತಾವನೆ:ಕುಕನೂರು ಎಪಿಎಂಸಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಸ್ತಾವನೆ ಸಲ್ಲಿಸಿ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿಸಿದ್ದರು. ಇದರಿಂದ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ಬಹುತೇಕ ರೈತ ವರ್ಗಕ್ಕೆ ಅನುಕೂಲ ಆಗಲಿದೆ. ರೈತರು ಬೆಳೆ ಶೇಖರಣೆ ಮಾಡಲು ಸ್ಥಳವಿಲ್ಲದೆ, ಲಾಭವಿಲ್ಲದಿದ್ದರೂ ಮಾರಾಟ ಮಾಡುವ ಪ್ರಸಂಗ ಎದುರಾಗುತ್ತಿತ್ತು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ₹7 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಿದ್ದಾರೆ.

2,200 ಮೆ.ಟನ್ ಸಂಗ್ರಹ ಸಾಮರ್ಥ್ಯ: ಕೋಲ್ಡ್ ಸ್ಟೋರೇಜ್ ಘಟಕದ ವಿಸ್ತೀರ್ಣ 2015 ಚಮೀ, ಘಟಕದ ಸ್ಟೋರೇಜ್ 2,200 ಮೆ. ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ. 8 ಕೋಲ್ಡ್ ರೂಮ್ ಗಳಿದ್ದು, ಪ್ರತಿಯೊಂದು 275 ಮೆ.ಟನ್ ಸಂಗ್ರಹದ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕುಕನೂರಿನ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಲಾಗಿದ್ದು, ಬೆಳೆ ರಕ್ಷಣೆಗೆ ಅನುಕೂಲವಾಗಲಿದೆ.

ಚಿಕ್ಕೊಪ್ಪದಲ್ಲಿ ಸಹ ಕೋಲ್ಡ್ ಸ್ಟೋರೇಜ್ ನಿರ್ಮಾಣ: ಯಲಬುರ್ಗಾ ತಾಲೂಕಿನ ಚಿಕ್ಕೋಪ್ಪದಲ್ಲಿ ಸಹ ಶಾಸಕ ಬಸವರಾಜ ರಾಯರಡ್ಡಿ ಆರ್‌ಐಡಿಎಫ್‌-30ರ ಯೋಜನೆಯಡಿ ₹11.50 ಕೋಟಿ ವೆಚ್ಚದಲ್ಲಿ 2850 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿಸಿದ್ದಾರೆ. ಅದು ನಿರ್ಮಾಣ ಸಹ ಈಗಾಗಲೇ ಆಗುತ್ತಿದೆ. ಇದು ಕುಕನೂರಿಗಿಂತ ದೊಡ್ಡದಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಕುಕನೂರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದರಿಂದ ಕೃಷಿ ಪದಾರ್ಥಗಳ ಸಂಗ್ರಹಣೆ ಮಾಡಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಾಗ ಮಾರಾಟ ಮಾಡಲು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಕೋಲ್ಡ ಸ್ಡೋರೇಜ್‌ನಲ್ಲಿ ತರಕಾರಿ, ಹಣ್ಣು ಪದಾರ್ಥಗಳು, ಆಹಾರ ಧಾನ್ಯಗಳು ಹಾಗೂ ಒಣ ಮೆಣಸಿನಕಾಯಿ ಇನ್ನಿತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಾಗ ಮಾರಾಟ ಮಾಡಲು ಸುತ್ತ ಮುತ್ತಲಿನ ರೈತರಿಗೆ ಅನುಕೂಲವಾಗುವುದು ಎಂದು ಕುಕನೂರ ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ ತಿಳಿಸಿದ್ದಾರೆ.