ರಾಜ್ಯದಲ್ಲಿ ಕುಸಿದ ಕಾನೂನು ಸುವ್ಯವಸ್ಥೆ

| Published : May 19 2024, 01:55 AM IST / Updated: May 19 2024, 01:17 PM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಆರೋಪಿಸಿದರು.

 ತಾಳಿಕೋಟೆ :  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು, ಪ್ರೀತಿ ನಿರಾಕರಿಸುವ ಹಿಂದೂ ಹೆಣ್ಣು ಮಕ್ಕಳ ಮೇಲೆ ಜಿಹಾದಿಗಳು ಅಟ್ಟಹಾಸ ಮೆರೆಯುವುದರೊಂದಿಗೆ ಹಾಡಹಗಲೇ ಹತ್ಯೆ ಮಾಡುವಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ಬಡಾವಣೆಯ ಅಂಜಲಿ ಎಂಬ ಹೆಣ್ಣು ಮಗಳನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ದೂರಿದರು.ಈ ಹತ್ಯೆ ನಡೆಯುವ ಮುಂಚೆ ಆ ಯುವಕ ಯುವತಿಯ ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದು ಪೊಲೀಸರಿಗೆ ಮಾಹಿತಿ ಮುಟ್ಟಿದೆ. ಆದರೂ ರಾಜ್ಯ ಸರ್ಕಾರದ ಕಪಿಮುಷ್ಟಿಯಲ್ಲಿ ಸಿಲುಕಿ ನಲಗುತ್ತಿರುವ ಪೊಲೀಸ್ ಇಲಾಖೆ ಆರೋಪಿಯನ್ನು ಕರೆಸಿ ಕಠಿಣ ಎಚ್ಚರಿಕೆಯನ್ನಾದರೂ ನೀಡಬೇಕಾಗಿತ್ತು. ರಾಜಕೀಯ ಒತ್ತಡಗಳಿಗೆ ಮಣಿದು ಸುಮ್ಮನೆ ಕುಳಿತಿದ್ದರ ಪರಿಣಾಮ ಹೆಣ್ಣು ಮಗಳು ಬಲಿಯಾಗಿದ್ದಾಳೆ. ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ. ಕೂಡಲೇ ಗೃಹಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮೇ ೧೬ರಂದು ತಾಳಿಕೋಟೆ ಪಟ್ಟಣದಲ್ಲಿ ಮಧ್ಯಾಹ್ನ ವೇಳೆ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಬಳಿ ಇದ್ದ ₹2.20ಲಕ್ಷ ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಇನ್ನು ಅನೇಕ ಪ್ರಕರಣಗಳು ನಡೆದಿವೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ ಇಲ್ಲದ ಕಿವುಡ ಸರ್ಕಾರವಾಗಿ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಬರ ಪರಿಹಾ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ನೀಡದೇ ರೈತರಿಗೆ ಮೋಸ ಮಾಡುತ್ತಿದೆ ಎಂದು ಹೇಳಿದರು.

ನ್ಯಾಷನಲ್ ಕ್ರೈಂ ಬ್ಯುರೋದವರು ವರದಿ ನೀಡಿದ್ದಾರೆ. ಕಳೆದ ೧೧ ತಿಂಗಳಲ್ಲಿ ಶೇ.೭೦ಕ್ಕಿಂತಲೂ ಹೆಚ್ಚಿಗೆ ಅಪರಾದ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಕರ್ನಾಟಕ ಈಗ ಗುಂಡಾಗಳ ರಾಜ್ಯವಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರವನ್ನು ಆಳುವವರೇ ಗುಂಡಾಗಳಾಗಿದ್ದಾರೆ ಎಂದು ದೂರಿದರು.

ಈ ಸಮಯದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಎಂ.ಡಿ.ಕುಂಬಾರ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ರಾಮು ಜಗತಾಪ, ಮಂಜುನಾಥ ಶೆಟ್ಟಿ, ರಾಘವೇಂದ್ರ ಚವ್ಹಾಣ, ಮಹಾಂತೇಶ ಮುರಾಳ, ನಾಗರಾಜ ಬಳಿಗಾರ ಮೊದಲಾದವರು ಇದ್ದರು.