ನಿಖರವಾದ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಿ: ಬಾಲಚಂದ್ರ ಜಾರಕಿಹೊಳಿ

| Published : Nov 07 2024, 12:41 AM IST

ನಿಖರವಾದ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಿ: ಬಾಲಚಂದ್ರ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಕಳೆದ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಡೆಯುತ್ತಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಜಾನುವಾರು ಸಂರಕ್ಷಣಾ ಯೋಜನೆಗಳನ್ನು ರೂಪಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಈ ವರ್ಷದ ಅಂತ್ಯತನಕ ಎಲ್ಲ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಗಣತಿದಾರರು ಪ್ರತಿಯೊಂದು ಮನೆ, ಸಂಸ್ಥೆ, ಉದ್ಯಮಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಸಾಕು ಪ್ರಾಣಿಗಳು ಮತ್ತು ಕುಕ್ಕಟಗಳ ಮಾಹಿತಿ ಸಂಗ್ರಹಿಸಬೇಕು. ಬೀದಿ ದನಗಳು, ಬೀದಿ ನಾಯಿಗಳ ಮಾಹಿತಿ ಸಹ ಸಂಗ್ರಹಿಸಬೇಕು. ಜೊತೆಗೆ ಕುಟುಂಬದ ಯಜಮಾನರ ಸಾಮಾಜಿಕ ಸ್ಥಿತಿಗತಿ, ವಿದ್ಯಾರ್ಹತೆ, ಉದ್ಯೋಗದ ಜತೆಗೆ ಕೃಷಿ ಹಿಡುವಳಿ ಬಗ್ಗೆಯೂ ಮಾಹಿತಿ ಸಂಗ್ರಹಿಸಿಕೊಳ್ಳುವಂತೆ ಅವರು ಪಶು ಪಾಲನಾ ಇಲಾಖೆಯವರಿಗೆ ಸೂಚಿಸಿದರು.

ಈ ಹಿಂದೆ ಅಂದರೆ 2019ರಲ್ಲಿ ನಡೆದಿದ್ದ ಜಾನುವಾರ ಗಣತಿಯಲ್ಲಿ ಗೋಕಾಕ ತಾಲೂಕಿನಲ್ಲಿ 2,83,861 ಮತ್ತು ಮೂಡಲಗಿ ತಾಲೂಕಿನಲ್ಲಿ 1,84,097 ಜಾನುವಾರುಗಳಿದ್ದವು ಎಂಬುದನ್ನು ಸ್ಮರಿಸಿದ ಅವರು, ಇದೇ ಡಿಸೆಂಬರ್ ತಿಂಗಳೊಳಗೆ ನಡೆಯುವ ಜಾನುವಾರು ಗಣತಿ ಕಾರ್ಯ ಮುಗಿದ ಬಳಿಕ ಮತ್ತೊಮ್ಮೆ ನಿಖರವಾದ ಮಾಹಿತಿ ಹೊರಬೀಳಲಿದೆ ಎಂದವರು ತಿಳಿಸಿದ್ದಾರೆ.

ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿದಾಗ ಅವರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಈ ರಾಷ್ಟ್ರೀಯ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಗೋ-ಮಾತೆಗೆ ಪೂಜೆ ಮಾಡುವ ಮೂಲಕ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ಮಾಡಿದರು.

ಗೋಕಾಕ ತಹಸೀದಾರ ಡಾ.ಮೋಹನ ಭಸ್ಮೆ, ಮೂಡಲಗಿ ತಹಸೀದಾರ ಎಸ್.ಎ. ಬಬಲಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಫ್.ಜಿ. ಚಿನ್ನನ್ನವರ, ಪರಶುರಾಮ ಗಸ್ತೆ, ಸ್ಥಳೀಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮೋಹನ ಕಮತ, ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು, ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.