ಬಾಕಿ ತೆರಿಗೆ ಸಂಗ್ರಹಿಸಿ, ಪ್ರಗತಿ ಸಾಧಿಸಿ: ಸಚಿವ ರಹೀಂ ಖಾನ್ ಸೂಚನೆ

| Published : Jan 28 2025, 12:46 AM IST

ಬಾಕಿ ತೆರಿಗೆ ಸಂಗ್ರಹಿಸಿ, ಪ್ರಗತಿ ಸಾಧಿಸಿ: ಸಚಿವ ರಹೀಂ ಖಾನ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳು ಬಾಕಿಯಿರುವ ತೆರಿಗೆ ಹಣ ಸಂಗ್ರಹಿಸಿ ಶೇಕಡಾವಾರು ಪ್ರಗತಿ ಸಾಧಿಸಬೇಕು

ಬಳ್ಳಾರಿ: ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳು ಬಾಕಿಯಿರುವ ತೆರಿಗೆ ಹಣ ಸಂಗ್ರಹಿಸಿ ಶೇಕಡಾವಾರು ಪ್ರಗತಿ ಸಾಧಿಸಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ವಿವಿಧ ಆಸ್ತಿ, ನೀರಿನ ಶುಲ್ಕ ಮತ್ತು ಅಂಗಡಿ ಶುಲ್ಕ, ಟ್ರೇಡ್ ಲೈಸೆನ್ಸ್ ತೆರಿಗೆ ಹಣವನ್ನು ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ವಸೂಲಿ ಮಾಡಿ ಗುರಿ ಸಾಧಿಸಬೇಕು. ಹೆಚ್ಚು ಬಾಕಿ ಇರುವಲ್ಲಿ ಪೌರಾಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವಸೂಲಿ ಮಾಡಬೇಕು.

ಆಸ್ತಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಕುರೇಕುಪ್ಪ ಪುರಸಭೆಯು 2024-25ನೇ ಸಾಲಿನಲ್ಲಿ ಕೇವಲ ಶೇ.13.26ರಷ್ಟು ಪ್ರಗತಿ ಸಾಧಿಸಿದ್ದು, ತೆರಿಗೆ ಹಣವನ್ನು ಆದ್ಯತೆ ಮೇಲೆ ವಸೂಲಿ ಮಾಡಬೇಕು ಎಂದರು.ಮಾಲೀಕರು ಮನೆಗಳ ನಿರ್ಮಾಣ ಸಂದರ್ಭದಲ್ಲಿ ಇರುವ ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳಿಗೆ ಕಟ್ಟಿರುತ್ತಾರೆ. ನಂತರ ಅವುಗಳನ್ನು ವಿಸ್ತರಣೆ ಮಾಡಿ, ಮೊದಲನೆ, ಎರಡನೇ ಮಹಡಿ ವಿಸ್ತೀರ್ಣ ಹೆಚ್ಚಿಸಿದರೂ ಹಳೆಯ ಕಟ್ಟಡದ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆಯಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯ ಅವಲಂಬಿತವಾಗಿದೆ. ಕಾಲುವೆಗಳ ಮುಖಾಂತರ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟಿನ್‌ ನಿರ್ವಹಣೆ: ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಕಾರ ನಿಗದಿಪಡಿಸಿರುವ ಗುಣಮಟ್ಟದಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕ್ಯಾಂಟೀನ್‌ಗಳಿಗೂ ಸಿಸಿಟಿವಿ ಅಳವಡಿಸಬೇಕು. ಆಯಾ ಸ್ಥಳೀಯ ಆಹಾರ ಪದ್ಧತಿ ಅನುಗುಣವಾಗಿ ಆಹಾರದ ಮೆನು ಸಿದ್ಧಪಡಿಸಿ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, 24*7 ಕುಡಿಯುವ ನೀರು ಸರಬರಾಜು, ಯುಜಿಡಿ ಸೇರಿದಂತೆ ವಿವಿಧ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ವರದಿಗಳ ಕುರಿತು ಮಾಹಿತಿ ಪಡೆದ ಸಚಿವರು ಹಲವು ಸಲಹೆ-ಸೂಚನೆ ಅಧಿಕಾರಿಗಳಿಗೆ ನೀಡಿದರು.

ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕ ವಿಜಯಕುಮಾರ್, ಅಧೀಕ್ಷಕ ಅಭಿಯಂತರ ಬಸವರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಘವೇಂದ್ರ, ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಂಠಸ್ವಾಮಿ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಂಜಿನಿಯರ್, ಇತರೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.