ವೈಜ್ಞಾನಿಕ ಸಾಕ್ಷ್ಯಾಧಾರ ಸಂಗ್ರಹಿಸಿ: ಸಿಐಡಿ ಡಿಜಿಪಿ

| Published : May 29 2024, 12:46 AM IST

ಸಾರಾಂಶ

ಪ್ರಕರಣದ ತನಿಖೆಗೆ ಪೂರಕವಾದ ವೈಜ್ಞಾನಿಕ ಸಾಕ್ಷ್ಯಸಂಗ್ರಹಕ್ಕೆ ಏನೆಲ್ಲ ಕ್ರಮವಹಿಸಬೇಕೆಂಬ ಸಲಹೆ ಮತ್ತು ಮಾರ್ಗದರ್ಶನವನ್ನು ಅಧಿಕಾರಿಗಳಿಗೆ ಸಿಐಡಿ ಡಿಜಿಪಿ ನೀಡಿದರು.

ಹುಬ್ಬಳ್ಳಿ:

ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ನಗರಕ್ಕೆ ಆಗಮಿಸಿರುವ ಸಿಐಡಿ ಡಿಜಿಪಿ ಡಾ. ಎಂ.ಎ.ಸಲೀಂ, ಮಂಗಳವಾರವೂ ಪ್ರಕರಣಗಳ ಕುರಿತು ಮತ್ತಷ್ಟು ಮಾಹಿತಿ ಪಡೆದರು. ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು. ಇದೇ ವೇಳೆ ನೇಹಾ ಹಿರೇಮಠ ಮನೆಗೂ ತೆರಳಿ ಪಾಲಕರೊಂದಿಗೆ ಚರ್ಚೆ ನಡೆಸಿದರು.

ಒಂದೇ ತಿಂಗಳೊಳಗೆ ನೇಹಾ ಹಾಗೂ ಅಂಜಲಿ ಹತ್ಯೆ ನಡೆದಿತ್ತು. ರಾಜ್ಯದಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದ ಎರಡು ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿತ್ತು. ನೇಹಾ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದರೆ, ಅಂಜಲಿ ಹತ್ಯೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.

ಸೋಮವಾರ ನಗರಕ್ಕೆ ಆಗಮಿಸಿರುವ ಡಿಜಿಪಿ ಸಲೀಂ ಮಂಗಳವಾರವೂ ನಗರದಲ್ಲೇ ಠಿಕಾಣಿ ಹೂಡಿ ಅಧಿಕಾರಿ ವರ್ಗಕ್ಕೆ ಮತ್ತಷ್ಟು ಸಲಹೆ ಸೂಚನೆ ನೀಡಿದರು.

ಸೋಮವಾರ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದ ಅವರು, ಮಂಗಳವಾರ ನೇಹಾ ಕೊಲೆಯಾದ ಸ್ಥಳವಾದ ಬಿವಿಬಿ ಕಾಲೇಜ್‌ ಕ್ಯಾಂಪಸ್‌ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಹಜರು ಕಡತ, ಆರೋಪಿಯ ಹೇಳಿಕೆ, ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷ್ಯಧಾರ, ಸಾಕ್ಷಿಗಳ ಕುರಿತು ಪರಾಮರ್ಶೆ ಮಾಡಿದರು.

ನಿವಾಸಕ್ಕೆ ಭೇಟಿ:

ನಂತರ ನೇಹಾ ಹಿರೇಮಠ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೇ, ಪ್ರಕರಣದ ಕುರಿತು ಅವರ ತಂದೆ ನಿರಂಜನ ಹಿರೇಮಠ ಅವರಿಂದ ಮತ್ತಷ್ಟು ಮಾಹಿತಿ ಪಡೆದರು. ಆರೋಪಿ ಫಯಾಜ್‌ ಕುರಿತು ಮತ್ತು ಸಿಐಡಿ ತಂಡ ಈಗಾಗಲೇ ಸಂಗ್ರಹಿಸಿರುವ ಮಾಹಿತಿ ಅನುಸಾರ ನಿರಂಜನ ಹಿರೇಮಠ ಅವರಿಂದ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳ ಸಭೆ:

ಪ್ರವಾಸಿ ಮಂದಿರದಲ್ಲಿ ತನಿಖಾ ತಂಡದೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ, ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಅಲ್ಲದೇ, ಪ್ರಕರಣದ ತನಿಖೆಗೆ ಪೂರಕವಾದ ವೈಜ್ಞಾನಿಕ ಸಾಕ್ಷ್ಯಸಂಗ್ರಹಕ್ಕೆ ಏನೆಲ್ಲ ಕ್ರಮವಹಿಸಬೇಕೆಂಬ ಸಲಹೆ ಮತ್ತು ಮಾರ್ಗದರ್ಶನ ಮಾಡಿದರು.

ಸಿಐಡಿ ಡಿಜಿಪಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರಂಜನ ಹಿರೇಮಠ, ತನಿಖಾ ತಂಡಕ್ಕೆ ಎಲ್ಲ ಆಯಾಮದಲ್ಲಿ ಸಹಕಾರ ನೀಡಿ ಅಗತ್ಯ ಮಾಹಿತಿ ನೀಡಲಾಗಿದೆ. ಮಗಳ ಕೊಲೆ ಪ್ರಕರಣದ ದೋಷಾರೋಪಣೆ ಪಟ್ಟಿ ಸಲ್ಲಿಕೆ ನಂತರ ತಮ್ಮಿಂದ ಮಾಹಿತಿ ಪಡೆದು ಯಾವ ರೀತಿ ತನಿಖೆ ನಡೆಸಿದ್ದಾರೆ ಎಂಬುದು ತಿಳಿಯಲಿದೆ. ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.

ನೇಹಾ ಕೊಲೆ ಪೂರ್ವ ನಿಯೋಜಿತ ಕೃತ್ಯ ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ಸಿಐಡಿ ವಿಚಾರಣೆ ವೇಳೆಯೂ ಅದನ್ನೇ ಹೇಳಿದ್ದೇನೆ. ಸಿಐಡಿ ತಂಡ ನಗರದಲ್ಲಿ ಬೀಡು ಬಿಟ್ಟಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ ಎಂದು ಭಾವಿಸಿದ್ದೇನೆ. ಈಗಾಗಲೇ ಸಿಐಡಿ ಡಿಜಿಪಿ ಸಲೀಂ ಅವರು ಕೂಡಾ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಇದೊಂದು ಮಾದರಿ ಪ್ರಕರಣವನ್ನಾಗಿ ಪರಿಗಣಿಸಿ ಸಮಾಜಕ್ಕೆ ಎಚ್ಚರಿಕೆ ಸಂದೇಶ ನೀಡುವುದರ ಜತೆಗೆ ಕೆಲವೇ ದಿನಗಳಲ್ಲಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.