ಬರಹಗಾರರಿಗೆ ಸಮಷ್ಟಿ ಪ್ರಜ್ಞೆ ಮುಖ್ಯ

| Published : Jul 13 2025, 01:18 AM IST

ಸಾರಾಂಶ

ಬರಹಗಾರರು ಸಮಷ್ಟಿ ಪ್ರಜ್ಞೆಯುಳ್ಳವರಾಗಿರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜಮುಖಿ ಬರಹಗಳು ಇಂದಿನ ಅವಶ್ಯಕತೆಯಾಗಿದೆ

ಹಾವೇರಿ:ಸತತ ಅಧ್ಯಯನ, ಪರಿಶ್ರಮ ಹಾಗೂ ಲೋಕಾನುಭವದಿಂದ ರೂಪುಗೊಂಡ ಕ್ರಿಯಾಶೀಲತೆಯಿಂದ ಸಾರ್ವತ್ರಿಕವಾದ ಸೃಜನಶೀಲ ಕಾವ್ಯ ಮೂಡುತ್ತದೆ. ಯುವಪೀಳಿಗೆಯು ಸಮಾಜಕ್ಕೆ ಒಳ್ಳೆಯ ಬರಹ ನೀಡಿ ಸಮಾಜದ ಉನ್ನತಿಗಾಗಿ ಶ್ರಮಿಸಬೇಕೆಂದು ಎಂದು ಸಾಹಿತಿ ಡಾ. ಪ್ರೇಮಾನಂದ ಲಕ್ಕಣ್ಣವರ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಜಿಲ್ಲಾ ಬರಹಗಾರರ ಸಂಘದ ಉದ್ಘಾಟನೆ, ಕೃತಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಶೈಲಜಾ ಕೋರಿಶೆಟ್ಟರ ಅವರ ಕಾವ್ಯ ಲಹರಿ ಕವನಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬರಹಗಾರರು ಸಮಷ್ಟಿ ಪ್ರಜ್ಞೆಯುಳ್ಳವರಾಗಿರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜಮುಖಿ ಬರಹಗಳು ಇಂದಿನ ಅವಶ್ಯಕತೆಯಾಗಿದೆ ಎಂದರು.

ಶಿಗ್ಗಾಂವಿಯ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಕಾವ್ಯ ಮನಸ್ಸನ್ನು ಪ್ರಪುಲ್ಲಗೊಳಿಸಿ ಬದುಕಿಗೆ ಉತ್ಸಾಹ, ಪ್ರೇರಣೆ ಒದಗಿಸಬೇಕು. ಆಧುನಿಕತೆಯ ಸೋಂಕಿನಿಂದ ಛಿದ್ರಗೊಳ್ಳುತ್ತಿರುವ ಮನಸ್ಸು ಮತ್ತು ಸಂಬಂಧಗಳನ್ನು ಬೆಸೆಯುವ ಸಾಹಿತ್ಯ ಇವತ್ತಿನ ತುರ್ತು ಅಗತ್ಯವಾಗಿದೆ. ಕನ್ನಡದ ಮನಸ್ಸುಗಳು ಒಂದಾಗಲು ಕಾವ್ಯಗಳು ಅತಿ ಮುಖ್ಯವಾಗಿವೆ ಎಂದರು.

ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ ಲಂಬಾಣಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ವಿಸ್ತರಿಸಲಾಗಿದೆ. ಯುವ ಬರಹಗಾರರಿಗೆ ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಸಾಹಿತ್ಯ ಕಮ್ಮಟ ಏರ್ಪಡಿಸಿ ಮೌಲ್ಯಯುತ ಸಾಹಿತ್ಯ ಸೃಷ್ಟಿಗೆ ಬರಹಗಾರರ ಸಂಘ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಗೌರವಾಧ್ಯಕ್ಷೆ ಸಿದ್ದುಮತಿ ನೆಲವಗಿ ಮಾತನಾಡಿದರು. ಬರಹಗಾರರ ಸಂಘದ ಜಿಲ್ಲಾಧ್ಯಕ್ಷೆ ಶೈಲಜಾ ಕೋರಿಶಟ್ಟರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

ಜಗದೀಶ ಮಾರಾಜಪೇಟೆ, ಎಂ.ಎಸ್. ಕೋರಿಶೆಟ್ಟರ, ಅಜ್ಜಪ್ಪಗೌಡ ಗೌಡಪ್ಪನವರ, ಹನುಮಂತರಾವ, ರಾಹುಲ್ ರಜಪೂತ, ಪುನೀತ್ ಕುಮಾರ್, ಸುಮನಾ ನಾರಾಯಣ ಹೆಗಡೆ, ಮೇಘನಾ ಟಿ.ಎಸ್., ಲೀಲಾವತಿ ಪಾಟೀಲ್ ಇತರರು ಪಾಲ್ಗೊಂಡಿದ್ದರು.

ಚಂಪಾ ಹುಣಸಿಕಟ್ಟಿ ಸ್ವಾಗತಿಸಿದರು. ಶಿಕ್ಷಕಿ ಮಮತಾ ಮಲ್ಲನಗೌಡ ನಿರೂಪಿಸಿದರು. ನೀಲಮ್ಮ ಗೌಡಪ್ಪನವರ ವಂದಿಸಿದರು.