ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಾಮೂಹಿಕ ಶ್ರಮದಾನ

| Published : Oct 02 2024, 01:03 AM IST

ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಾಮೂಹಿಕ ಶ್ರಮದಾನ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ನಗರದ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಸ್ವಚ್ಛತಾ ಕಾರ್ಯದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡು ಶ್ರಮದಾನ ಮಾಡಿದರು.

ಹಾವೇರಿ: ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ನಗರದ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಸ್ವಚ್ಛತಾ ಕಾರ್ಯದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡು ಶ್ರಮದಾನ ಮಾಡಿದರು. ಶಾಸಕ ರುದ್ರಪ್ಪ ಲಮಾಣಿ, ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪೊರಕೆ ಹಿಡಿದು ನಗರದ ಸ್ವಚ್ಛತಾ ಕಾರ್ಯ ಕೈಗೊಂಡರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಸ್ವಚ್ಛತಾ ಕಾರ್ಯದ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು, ಮಹಾನ್ ವ್ಯಕ್ತಿಗಳ ಪುತ್ಥಳಿಯ ಸುತ್ತಮುತ್ತ ಕಸ ಹಾಕದಂತೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ನಿವಾಸಿಗಳಿಗೆ ತಿಳಿವಳಿಕೆ ಹೇಳಿದರು. ಸ್ವಚ್ಛತೆ ಬಗ್ಗೆ ಕಾಳಜಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ವೃತ್ತ ಹಾಗೂ ರಸ್ತೆಯಲ್ಲಿ ಪೊರಕೆಹಿಡಿದು ಬೀದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ನಂತರ ಶಿವಬಸವನಗರ ಹಾಗೂ ಸಿಂದಗಿಮಠದ ಸುತ್ತಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಶಿವಬಸವನಗರ ಹಾಗೂ ಸಿಂದಗಿಮಠದ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಅವರು ಶ್ರಮದಾನದಲ್ಲಿ ಭಾಗವಹಿಸಿದರು. ಶಿವಾಜಿನಗರ ಮೂರನೇ ಕ್ರಾಸ್‌ನಲ್ಲಿ ಸ್ಥಳೀಯ ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಅವರು ದುಂಡಿ ಬಸವೇಶ್ವರ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ ಎಂ.ಬರಗಿಮಠ ಹಾಗೂ ವಾರ್ತಾಧಿಕಾರಿ ಭಾರತಿ ಎಚ್. ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ನಗರದ ಸಂಗೂರ ಕರಿಯಪ್ಪ ವೃತ್ತ ಹಾಗೂ ಗುತ್ತಲ ರಸ್ತೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಅವರ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿಗಳು ಹಾಗೂ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ರಸ್ತೆಗಳ ಕಸಗುಡಿಸಿದರು. ಬಸವೇಶ್ವನಗರದಲ್ಲಿ ನಗರಸಭೆ ಸದಸ್ಯ ಗಿರೀಶ ತುಪ್ಪದ, ಶಿವಯೋಗಿ ಹೂಲಿಕಂತಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ಪಿ.ಆರ್.ಹಾವನೂರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಜೆ.ಸಿ.ನಿಡಗುಂದಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಹಾಗೂ ಆರೋಗ್ಯ ಇಲಾಖೆ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.ನಗರದ ಎಲ್ಲ ೩೨ ವಾರ್ಡ್‌ಗಳ ಸದಸ್ಯರು ಹಾಗೂ ಐವತ್ತೂ ಅಧಿಕ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಅಧಿಕಾರಿ -ನೌಕರರು ತಂಡ ತಂಡವಾಗಿ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡು ಜೆ.ಎಚ್.ಪಟೇಲ್ ವೃತ್ತ, ವಿ.ಕೃ.ಗೋಕಾಕ ವೃತ್ತ, ಶ್ರೀ ಬಸವೇಶ್ವರ ವೃತ್ತ, ಸುಭಾಸ ವೃತ್ತ, ವಿ.ಕೃ.ಗೋಕಾಕ, ಜೆ.ಪಿ.ವೃತ್ತ, ಮಹಾತ್ಮಗಾಂಧಿ ವೃತ್ತ,ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ವಿವಿಧ ಉದ್ಯಾನವನಗಳು, ನಗರದ ಪ್ರಮುಖ ಬೀದಿಗಳ ಸ್ವಚ್ಛತೆ ಕಾರ್ಯ ನೆರವೇರಿಸಿದರು.ತಹಸೀಲ್ದಾರ ಶರಣಮ್ಮ, ಗ್ರೇಡ್-೨ ತಹಸೀಲ್ದಾರ ಅಮೃತಗೌಡ ಪಾಟೀಲ, ಪೌರಾಯುಕ್ತ ಪರಶುರಾಮ ಚಲವಾದಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಉಮೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮೊದಲಾದವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರದಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ಹೇಳಿದರು.