ಸಾರಾಂಶ
ವಿವಿಧ ಕಾರ್ಯಯೋಜನೆಗಳನ್ನು ಪರಿಗಣಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಘಟಕ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಇತ್ತೀಚಿಗೆ ಬೆಂಗಳೂರಿನ ರಾಜಭವನದಲ್ಲಿ ಆಯೋಜಿತ ವಾರ್ಷಿಕ ಮಹಾಸಭೆಯಲ್ಲಿ ಕೊಡಗು ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಮಡಿಕೇರಿವಿವಿಧ ಸೇವಾ ಯೋಜನೆಗಳಿಗಾಗಿ ರಾಜ್ಯದಲ್ಲಿಯೇ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯಪಾಲರಿಂದ ಪ್ರಶಸ್ತಿಗೆ ಪಾತ್ರವಾದ ಕೊಡಗು ಜಿಲ್ಲಾ ರೆಡ್‌ಕ್ರಾಸ್ ಘಟಕಕ್ಕೆ ಜಿಲ್ಲಾಧಿಕಾರಿ ವೆಂಕಟ ರಾಜಾ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಜಿಲ್ಲಾ ಘಟಕವು ಕಳೆದ 1 ವರ್ಷದಲ್ಲಿ ಕೈಗೊಂಡ ರಕ್ತನಿಧಿ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಮಳೆ ಹಾನಿ ಸಂತ್ರಸ್ತರಿಗೆ ನೆರವು, ಅತ್ಯಧಿಕ ಸಂಖ್ಯೆಯಲ್ಲಿ ಅಜೀವ ಸದಸ್ಯರ ನೋಂದಣಿ, ವಿದ್ಯಾರ್ಥಿ ಘಟಕಗಳ ಸಕ್ರಿಯ ಕಾರ್ಯಚಟುವಟಿಕೆ, ಸ್ವಂತ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಯೋಜನೆಗಳನ್ನು ಪರಿಗಣಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಘಟಕ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಇತ್ತೀಚಿಗೆ ಬೆಂಗಳೂರಿನ ರಾಜಭವನದಲ್ಲಿ ಆಯೋಜಿತ ವಾರ್ಷಿಕ ಮಹಾಸಭೆಯಲ್ಲಿ ಕೊಡಗು ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಕೊಡಗು ರೆಡ್‌ಕ್ರಾಸ್ ವತಿಯಿಂದ ಕಾರ್ಯಯೋಜನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ಜಿಲ್ಲಾಧಿಕಾರಿ ವೆಂಕಟ ರಾಜ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.ಈ ಸಂದರ್ಭ ಕೊಡಗು ರೆಡ್‌ಕ್ರಾಸ್ ಸಾಧನೆಗಳಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿಯೂ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವನ್ನು ರೆಡ್ ಕ್ರಾಸ್ ಜನಪರ ಕಾರ್ಯಕ್ರಮಗಳಿಗೆ ನೀಡುವುದಾಗಿ ಭರವಸೆ ನೀಡಿದರು.ಕೊಡಗು ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ, ಉಪಾಧ್ಯಕ್ಷ ಅನಿಲ್ ಎಚ್.ಟಿ. ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ನಿರ್ದೇಶಕರಾದ ಎಂ.ಧನಂಜಯ್, ಸತೀಶ್ ರೈ, ವಿಜಯ್ ಶೆಟ್ಟಿ. ಶರತ್ ಶೆಟ್ಟಿ ಹಾಜರಿದ್ದರು.