ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಹಾಗೂ ತಮ್ಮವರನ್ನು ಕೂಡ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಹಮ್ಮಿಕೊಳ್ಳಲಾದ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿಮಾತನಾಡಿದರು.
ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯು ವಿವೇಚನೆಯಿಂದ ಅರ್ಹ ವ್ಯಕ್ತಿಗೆ ನೀಡುವ ಮೂಲಕ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮುಂದಾಗಬೇಕು. ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರವುಳಿಯದೆ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಏ.26 ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು. ಪ್ರತಿ ಮತವೂ ಅತ್ಯಮೂಲ್ಯವಾದದ್ದು, ಪ್ರಜಾಪ್ರಭುತ್ವದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ ಏ.26 ರಂದು ಮನೆಯಿಂದ ಹೊರಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಭದ್ರಪಡಿಸೋಣ. ಕೊಡಗು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಪ್ರಮಾಣ ಅಧಿಕಗೊಳಿಸಲು ಈಗಾಗಲೇ ಹಲವಾರು ಚಟುವಟಿಕೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೈಗೊಳ್ಳಲಾಗಿದೆ. ಈ ಮತದಾನದ ಜಾಗೃತಿಯಿಂದ ಜಿಲ್ಲೆಯ ಮತದಾನದ ಪ್ರಮಾಣ ರಾಜ್ಯದಲ್ಲಿಯೇ ಅತೀ ಹೆಚ್ಚು ಆಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದರು.ವಿವಿಧ ಸ್ಲೋಗನ್ ಸಹಿತ ಜಾಥಾ:
ನಮ್ಮ ಮತ, ನಮ್ಮ ಹಕ್ಕು, ಪ್ರತೀ ಮತ ಅತ್ಯಮೂಲ್ಯ, ತಪ್ಪದೇ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮತ ಚಲಾಯಿಸೋಣ, ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ ಮುಂತಾದ ಸ್ಲೋಗನ್‌ಗಳನ್ನು ಒಳಗೊಂಡ ಬಂಟಿಗ್ಸ್‌ಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾಲ್ನಡಿಗೆ ಜಾಥಾ ಯಶಸ್ವಿಯಾಯಿತು.ಬೀದಿ ನಾಟಕ: ನಗರದ ಕಾವೇರಿ ಕಲಾಕ್ಷೇತ್ರಕ್ಕೆ ಕಾಲ್ನಡಿಗೆ ಜಾಥ ಮೂಲಕ ಆಗಮಿಸಿದ ಗಣ್ಯರು, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಲಾವಿದರಿಂದ ಬೀದಿನಾಟಕ ಪ್ರದರ್ಶನ ಜರುಗಿತು. ಮತ ಮಾರಾಟಕ್ಕಿಲ್ಲ, ಯಾವುದೇ ಆಮಿಷಗಳಿಗೆ ಮತ ನೀಡದೆ ಮಕ್ಕಳ ಹಾಗೂ ಪ್ರಜಾಪ್ರಭುತ್ವದ ಉತ್ತಮ ಭವಿಷ್ಯಕ್ಕಾಗಿ ನಮ್ಮ ಮತವನ್ನು ಅರ್ಹರಿಗೆ ಚಲಾಯಿಸೋಣ ಎಂಬ ಸಂದೇಶದ ನಾಟಕ ಪ್ರದರ್ಶನ ಉತ್ತಮವಾಗಿ ಪ್ರದರ್ಶನಗೊಂಡಿತು.
ಪ್ರತಿಜ್ಞಾ ವಿಧಿ ಬೋಧನೆ:ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾ ವಿಧಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಬೋಧಿಸಿದರು.
ಕಾಲ್ನಡಿಗೆ ಜಾಥಾ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಆರಂಭವಾಗಿ ಜನರಲ್ ವೃತ್ತದ ಮಾರ್ಗವಾಗಿ ಕಾವೇರಿ ಕಲಾಕ್ಷೇತ್ರ ತಲುಪುವ ಕಾಲ್ನಡಿಗೆ ಅಂತಿಮಗೊಂಡಿತು. ಜಾಥಾದಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಾಧಿಕಾರಿಗಳು ಪಾಲ್ಗೊಂಡರು.