ಕುಡಿಯುವ ನೀರಿನ ಸಮಸ್ಯೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

| Published : May 04 2024, 12:31 AM IST

ಸಾರಾಂಶ

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಇದ್ದರೂ ಅಧಿಕಾರಿಗಳು ನೀರು ಪೂರೈಕೆ ಮಾಡದಿದ್ದಲ್ಲಿ ಅದು ಖಂಡಿತವಾಗಿಯು ಜಿಲ್ಲಾಡಳಿತದ ಗಮನಕ್ಕೆ ಬರಲಿದೆ. ಆಗ ಜಿಲ್ಲಾಡಳಿತದಿಂದ ಸಂಬಂಧಿತ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮವಹಿಸುವುದು ಅನಿವಾರ್ಯ ಎಂದು ಕೊಡಗು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಸಂದರ್ಭಾನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಪೂರೈಕೆ ಸಮಸ್ಯೆ ಎದುರಾದಲ್ಲಿ ಹತ್ತಿರದ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಇರುವ ಬೋರ್‌ವೆಲ್‌ಗಳ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ತಾಲೂಕು ಆಡಳಿತಗಳಿಗೆ ಸೂಚನೆ ನೀಡಿದರು.

ತಾಲೂಕು ಮಟ್ಟದಲ್ಲಿ ಪ್ರತಿ 15 ದಿನಕ್ಕೊಮ್ಮೆ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಏರ್ಪಡಿಸುವ ಮೂಲಕ ಸಮರ್ಪಕ ನೀರು ಪೂರೈಕೆಯಲ್ಲಿನ ತೊಂದರೆಗಳ ನಿವಾರಣೆಗೆ ಮುಂದಾಗಬೇಕು. ತಾಲೂಕು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀಲನೆಯನ್ನು ಸಂದರ್ಭಾನುಸಾರ ನಡೆಸಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಕುಡಿಯುವ ನೀರಿನ ಪೂರೈಕೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಇದ್ದರೂ ಅಧಿಕಾರಿಗಳು ನೀರು ಪೂರೈಕೆ ಮಾಡದಿದ್ದಲ್ಲಿ ಅದು ಖಂಡಿತವಾಗಿಯು ಜಿಲ್ಲಾಡಳಿತದ ಗಮನಕ್ಕೆ ಬರಲಿದೆ. ಆಗ ಜಿಲ್ಲಾಡಳಿತದಿಂದ ಸಂಬಂಧಿತ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮವಹಿಸುವುದು ಅನಿವಾರ್ಯ. ಅಧಿಕಾರಿಗಳು ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಣೆಗೆ ಮುಂದಾಗಬೇಕು ಎಂದರು.

ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಾರ್ಡುವಾರು ನೀರು ಪೂರೈಕೆ ವಿವರವನ್ನು ಜನಸಾಮಾನ್ಯರಿಗೆ ಪ್ರತೀ ದಿನ ಮಾಧ್ಯಮ ಮೂಲಕ ತಿಳಿಸಿಕೊಡಬೇಕು. ಇದರಿಂದ ನಗರ ಪ್ರದೇಶದ ನಾಗರಿಕರು ನೀರು ಪೂರೈಕೆ ಮಾಡುವ ವೇಳೆಯಲ್ಲಿ ಮನೆಯಲ್ಲಿದ್ದು, ನೀರು ಸಂಗ್ರಹಣೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಜಿಲ್ಲೆಯ ಜಾನುವಾರುಗಳ ಮೇವಿನ ಪರಿಸ್ಥಿತಿ ಕುರಿತು ಸಂಬಂಧಿತ ಅಧಿಕಾರಿಯಿಂದ ಮಾಹಿತಿ ಪಡೆದರು. ಸಮರ್ಪಕ ಮೇವು ಪೂರೈಕೆ ಮಾಡುವುದು ಪಶುಪಾಲನಾ ಇಲಾಖಾ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅವರು ತಮ್ಮ ಇಲಾಖೆಯ ಇನ್ನುಳಿದ ಅಧಿಕಾರಿ ಸಿಬ್ಬಂದಿ ಮೂಲಕ ಸರಿಯಾಗಿ ಮೇವು ಸರಬರಾಜಿಗೆ ಮುಂದಾಗುವಂತೆ ತಿಳಿಸಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಮಾತನಾಡಿ, ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಿರುವಂತೆ ಹೇಳಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಾಗರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಸಿದ್ದೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.