ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರೆ ಪ್ರಯುಕ್ತ ಏ.15 ರಂದು ನಡೆಯಲಿರುವ ಮಹಾ ರಥೋತ್ಸವ ದಿನದಂದು ವಾಹನದ ದಟ್ಟಣೆ ನಿಯಂತ್ರಿಸುವ ಸಲುವಾಗಿ ಏಕಮುಖ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಎಡೆಯೂರು ಜಾತ್ರೆಯು ಏ. 8 ರಿಂದ 23ರವರೆಗೆ ಜರುಗಲಿದ್ದು, ಈ ಅವಧಿಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಬಂಗಾರದ ಆಭರಣಗಳ ರಕ್ಷಣೆಗಾಗಿ ಇಬ್ಬರು ಸಶಸ್ತ್ರ ಆರಕ್ಷಕ ಸಿಬ್ಬಂದಿ ಹಾಗೂ ಜಾತ್ರಾ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಆರಕ್ಷಕ ಸಿಬ್ಬಂದಿ ನಿಯೋಜಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಾತ್ರಾ ಅವಧಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು. ತುರ್ತು ಚಿಕಿತ್ಸಾ ವಾಹನವನ್ನು ಒದಗಿಸುವುದರೊಂದಿಗೆ ಚಿಕಿತ್ಸೆ ನೀಡಲು ಔಷಧಿಯೊಂದಿಗೆ ಸಿಬ್ಬಂದಿ ನಿಯೋಜಿಸಬೇಕೆಂದರಲ್ಲದೆ, ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲಾಗುವ ಪ್ರಸಾದವನ್ನು ವಿತರಣೆ ಮಾಡುವ ಮುನ್ನ ಆರೋಗ್ಯ ವೈದ್ಯಾಧಿಕಾರಿಗಳು ಆಹಾರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.ಜಾತ್ರೆ ಸಮಯದಲ್ಲಿ ನಿರಂತರ 3 ಫೇಸ್ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂ ಇಲಾಖೆಗೆ, ರಥದ ದೃಢತೆ ಬಗ್ಗೆ ದೃಢೀಕ ರಣ ಪತ್ರ ನೀಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಸ್ಥಳೀಯ ಪಂಚಾಯತಿಗೆ ನಿರ್ದೇಶಿಸಿದರು.
ಜಾತ್ರೆಗೆ ಬರುವ ಜಾನುವಾರುಗಳಿಗೆ ಸೋಂಕು ರೋಗಗಳು ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲೂಕಿನಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ಏ.೧೫ ರಂದು ನಡೆಯಲಿರುವ ಮಹಾ ರಥೋತ್ಸವ ಹಾಗೂ ೧೭ ರಂದು ನಡೆಯಲಿರುವ ಬೆಳ್ಳಿ ಪಲ್ಲಕ್ಕಿ ಉತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಎಡೆಯೂರು ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಹಾಗೂ ಸ್ವಾಗತ ಬೋರ್ಡ್‌ಗಳನ್ನು ಅಳವಡಿಸಬೇಕೆಂದರಲ್ಲದೆ, ಜಾತ್ರೆ ಅವಧಿಯಲ್ಲಿ ಕುಣಿಗಲ್ ಪುರಸಭೆಯಿಂದ 20 ಸ್ವಚ್ಛತಾ ಸಿಬ್ಬಂದಿ ತಾತ್ಕಾಲಿಕವಾಗಿ ನಿಯೋಜಿಸುವ, ಮದ್ಯ ಮಾರಾಟ ಹಾಗೂ ಮಾಂಸದ ಅಂಗಡಿಗಳನ್ನು ತೆರೆಯದಂತೆ ನಿಷೇಧಾದೇಶ ಹೊರಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಎಸ್ಪಿ ಅಶೋಕ್ ಕೆ.ವಿ., ಮುಜರಾಯಿ ತಹಸೀಲ್ದಾರ್ ಸವಿತಾ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ, ಗಿರೀಶ್ ಬಾಬು ರೆಡ್ಡಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಹಾಗೂ ಪ್ರಧಾನ ಅರ್ಚಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.