ಜಿಲ್ಲಾಧಿಕಾರಿ ಭರವಸೆ: ಅನಿರ್ದಿಷ್ಟಾವಧಿ ಹೋರಾಟಕ್ಕೆ ಬ್ರೇಕ್

| Published : Dec 06 2024, 08:57 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕು ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ, ಆಡಳಿತ ವೈಫಲ್ಯ ಸರಿಪಡಿಸುವಂತೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸಿಪಿಐ(ಎಂ), ವಿವಿಧ ದಲಿತ ಸಂಘಟನೆಗಳು ಪ್ರಾರಂಭಿಸಿದ್ದ ಜಿಲ್ಲಾ ಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಗುರುವಾರ ಪ್ರಕಟಿಸಲಾಗಿದೆ.

ದೊಡ್ಡಬಳ್ಳಾಪುರ: ತಾಲೂಕು ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ, ಆಡಳಿತ ವೈಫಲ್ಯ ಸರಿಪಡಿಸುವಂತೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸಿಪಿಐ(ಎಂ), ವಿವಿಧ ದಲಿತ ಸಂಘಟನೆಗಳು ಪ್ರಾರಂಭಿಸಿದ್ದ ಜಿಲ್ಲಾ ಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಗುರುವಾರ ಪ್ರಕಟಿಸಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎನ್.ಶಿವಶಂಕರ್, ಇದೇ ಡಿ.11ರಂದು ತಮ್ಮ ಕಚೇರಿಯಲ್ಲಿ ಸಭೆ ನಡೆಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇಲ್ಲಿನ ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಆಡಳಿತ ವ್ಯವಸ್ಥೆ ದೂರವಾಗಿದೆ. ಉಪವಿಭಾಗಾಧಿಕಾರಿಯವರು ಕಚೇರಿಯಲ್ಲಿ ಸಿಗುವುದಿಲ್ಲ, ಸಂಬಂಧಪಟ್ಟ ವಿಷಯ ನಿರ್ವಾಹಕರೂ ಲಭ್ಯವಿರುವುದಿಲ್ಲ, ತಹಸೀಲ್ದಾರ್ ಅವರನ್ನಂತೂ ಕೇಳವುದೇ ಬೇಡ, ಒಂದು ದಿನವೂ ಕಚೇರಿಯಲ್ಲಿ ಇರುವುದಿಲ್ಲ. ಜನ ಸಾಮಾನ್ಯರು ಅವರನ್ನು ಭೇಟಿಯಾಗಬೇಕಾದರೆ ತಿಂಗಳಾನುಘಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಣವಂತರ ಕೆಲಸಗಳು ಮಾತ್ರ ಸುಗಮವಾಗಿ ನಡೆಯುತ್ತಿವೆ. ಬಡವರು, ರೈತರು ಸರ್ಕಾರಿ ಕಚೇರಿಗೆ ಅಲೆದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಆರ್.ಚಂದ್ರತೇಜಸ್ವಿ, ಪ್ರಭಾಬೆಳವಂಗಲ, ಪಿಎ ವೆಂಕಟೇಶ್, ರುದ್ರಾರಾಧ್ಯ, ದಲಿತ ಸಂಘಟನೆಗಳ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಗೂಳ್ಯಹನುಮಣ್ಣ, ಹೆಣ್ಣೂರು ಶ್ರೀನಿವಾಸ್, ಚಿನ್ನಸ್ವಾಮಿ, ವೆಂಕಟೇಶ್, ಕೆಆರ್‌ಎಸ್ ಪಕ್ಷದ ಶಿವಶಂಕರ್ ಮತ್ತಿತರರು ದೂರಿದರು.

ಜಿಲ್ಲೆಯ ನಾಲ್ಕೂ ತಾಲೂಕುಗಳ ಪರಿಸ್ಥಿತಿ ಇದೇ ಆಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಗಡಿ ಭಾಗದ ಸಾಸಲು, ತೂಬಗೆರೆ ಹೋಬಳಿಯಲ್ಲಿ ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಬಡ ರೈತರಿಗೆ ದಶಕಗಳು ಕಳೆದರೂ ಸಹ ಸಾಗುವಳಿ ಚೀಟಿ ಮಂಜೂರಾಗಿಲ್ಲ. ಆದರೆ ತಾಲೂಕು ಕಚೇರಿ, ನಗರಸಭೆಗೆ ಕೂಗಳತೆ ದೂರದಲ್ಲಿ ಭೂಮಿ ಹೊಂದಿರುವ ಶ್ರೀಮಂತರಿಗೆ ಕೋಟ್ಯಂತರ ರು.ಬೆಲೆ ಬಾಳುವ ಭೂಮಿ ಮಂಜೂರಾಗಿದೆ ಎಂದು ಆರೋಪಿಸಿದರು.

ಇದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಹತ್ತಾರು ಸಮಸ್ಯೆಗಳ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಆಡಳಿತ ಯಂತ್ರ ಸುಧಾರಣೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್. ಶಿವಶಂಕರ್, ಡಿ.11 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಅಹವಾಲು ಆಲಿಸಿ ಸಮಸ್ಯೆ ಪರಿಹರಿಸಲಾಗುವುದು. ಬಡವರು, ರೈತರ ಪರವಾದ ಆಡಳಿತ ನೀಡುವ ಕುರಿತಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರದ ವಕೀಲರು ಬೆಂಬಲ ನೀಡಿ ಭಾಗವಹಿಸಿದ್ದರು.

ಫೋಟೋ-

5ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.