ಸಾರಾಂಶ
ವಿಜ್ಞಾನದಲ್ಲಿ ಭಾರತ ಇಂದು ಮಾಡಿರುವ ಸಾಧನೆ ಅಪಾರ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಉತ್ತಮ ಶಿಕ್ಷಣ ಪಡೆದ ನಮ್ಮವರು ಜ್ಞಾನ, ವಿಜ್ಞಾನದಲ್ಲಿ ಭಾರತ ಇಂದು ಮಾಡಿರುವ ಸಾಧನೆ ಅಪಾರವೆಂದು ಬೆಳಗಾವಿ ಜಿಲ್ಲೆ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಹೇಳಿದರು. ಪಟ್ಟಣದ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜಿನ ವಾರ್ಷಿಕೋತ್ಸವ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭಾರತ ನಮಗೆಲ್ಲವನ್ನು ಕೊಟ್ಟಿದ್ದು ಅದಕ್ಕೆ ನಾವೇನು ಕೊಡಬಹುದು ಎಂಬುವುದನ್ನು ನಾವು ಅರಿಯಬೇಕಿದೆ. ಇಂದಿನ ಮಕ್ಕಳಿಗೆ ಅಕ್ಷರದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕಿದೆ. ಚಿಕ್ಕ ವಯಸ್ಸಿನ ಮಕ್ಕಳು ಇಂದು ಅತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳ ಮನಸ್ಸು ವಿಕಸಿತವಾಗುವಂತಹ ಶಿಕ್ಷಣ ನೀಡಬೇಕಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಸಿದ್ದು ದಿವಾನ ಮಾತನಾಡಿ, ಪಾಲಕರು ಮಕ್ಕಳ ಜೊತೆ ಬೆರೆಯಬೇಕು. ಅವರಲ್ಲಿನ ಭಯ ಹೋಗಲಾಡಿಸಬೇಕು, ಸಾಮಾಜಿಕ ಮೌಲ್ಯವನ್ನು ಬಿತ್ತುವ ಕೆಲಸ ಶಾಲೆಗಳೊಂದಿಗೆ ಮನೆಯಿಂದಲೂ ನಡೆಯಬೇಕಿದೆ ಎಂದರು. ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ನೂರ ಮಾತನಾಡಿದರು. ಕಾರ್ಯಕ್ರಮವನ್ನು ಸಂಸ್ಥೆಯ ಡಾ.ಶಂಕರ ಅಥಣಿ, ಮಹೇಶ ಯಾದವಾಡ ಉದ್ಘಾಟಿಸಿದರು. ಶಂಕರ ಮಂಗಸೂಳಿ, ಪ್ರಕಾಶ ಕಾಲತಿಪ್ಪಿ, ಬಿಇಒ ಎ.ಕೆ.ಬಸಣ್ಣವರ, ಬಿ.ಆರ್.ಸಿ ರಮೇಶ ಅವಟಿ, ಸಿರ‍್ಪಿ ಎ.ಆರ್.ಮುಧೋಳ, ಕಾಲೇಜು ಪ್ರಾಚಾರ್ಯ ಜಾಯ್ ಸೆಬಾಸ್ಟಿಯನ್, ಸಂಸ್ಥೆಯ ಆಡಳಿತಾಧಿಕಾರಿ ಎಮ್.ಬಿ.ಮಾಳೇದ, ಶಿವಾನಂದ ನಿವರಗಿ ಸೇರಿದಂತೆ, ಶಿಕ್ಷಕರು, ಪಾಲಕರು ಹಾಗೂ ಸಾಲಾ ಮಕ್ಕಳು ಇದ್ದರು.ಮಕ್ಕಳಿಗೆ ಪಾರಿತೋಷಕ ವಿತರಣೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.