ಸಾರಾಂಶ
ಹಾನಗಲ್ಲ: ಉಪನ್ಯಾಸಕರಿಲ್ಲದೆ 2 ತಿಂಗಳು ಕಳೆದಿದೆ, ಒಂದು ತಿಂಗಳಲ್ಲಿ ಪರೀಕ್ಷೆ ಇದೆ. ತರಗತಿಗಳಿಲ್ಲ, ಪರೀಕ್ಷೆ ಬರೆಯುವುದು ಹೇಗೆ, ಉಪನ್ಯಾಸಕರನ್ನು ಒದಗಿಸಿ ಎಂದು ಹಾನಗಲ್ಲ ಸಮೀಪದ ಮಲ್ಲಿಗಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು. ಗುರುವಾರ ಇಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ವಿದ್ಯಾರ್ಥಿಗಳು 3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಆರಂಭಕ್ಕೆ ತಾಲೂಕು ತಹಸೀಲ್ದಾರರು ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಆದರೆ ತಹಸೀಲ್ದಾರ್ ಪರವಾಗಿ ಶಿರಸ್ತೇದಾರರು ಮನವಿ ಸ್ವೀಕರಿಸಲು ಆಗಮಿಸಿದಾಗ ವಿದ್ಯಾರ್ಥಿಗಳು ಮನವಿ ನೀಡಲು ನಿರಾಕರಿಸಿದರು. ಆಗಲೇ ಪ್ರತಿಭಟನೆ ಆರಂಭವಾಗಿ ಒಂದು ತಾಸು ಆಗಿತ್ತು. ಈಗ ವಿದ್ಯಾರ್ಥಿಗಳು ರಸ್ತೆತಡೆ ನಡೆಸಲು ತೀರ್ಮಾನಿಸಿದರು.ರಸ್ತೆತಡೆ ನಡೆಸಲು ಮುಂದಾದಾಗ ಪಿಎಸ್‌ಐ ಸಂಪತ್ತ ಆನಿಕಿವಿ ತಡೆದರು. ಆಗ ತಹಸೀಲ್ದಾರ್ ಆಗಮಿಸಲು ಕಾಲಾವಕಾಶ ಕೇಳಲಾಯಿತು. ಮತ್ತೆ ಅರ್ಧ ಗಂಟೆಯಾದರೂ ತಹಸೀಲ್ದಾರ್ ಆಗಮಿಸದ ಕಾರಣ ಅನಿವಾರ್ಯವಾಗಿ ಮಹಾತ್ಮಾ ಗಾಂಧೀ ವೃತ್ತದಲ್ಲಿ ಎರಡು ಗಂಟೆಗಳ ಕಾಲ ರಸ್ತೆತಡೆ ನಡೆಸಿದರು. ನಂತರ ಆಗಮಿಸಿದ ತಾಲೂಕು ತಹಸೀಲ್ದಾರ್ ಎಸ್. ರೇಣುಕಾ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಕಾಲೇಜು ಆರಂಭವಾಗಿ 2 ತಿಂಗಳು ಕಳೆದಿದೆ. ಪಾಠಗಳೇ ಆಗಿಲ್ಲ. ಇನ್ನು ಒಂದೇ ತಿಂಗಳಲ್ಲಿ ಪರೀಕ್ಷೆಗಳಿವೆ. ಪರೀಕ್ಷೆ ಬರೆಯುವುದು ಹೇಗೆ? ಬಡ ಕುಟುಂಬದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದ ಕಾರಣದಿಂದ ಸರ್ಕಾರಿ ಕಾಲೇಜುಗಳಲ್ಲಿ ಓದಲು ಬಯಸುತ್ತಾರೆ. ಆದರೆ ಸರ್ಕಾರ ಉಪನ್ಯಾಸಕರನ್ನೇ ಒದಗಿಸದಿದ್ದರೆ ವಿದ್ಯಾರ್ಥಿಗಳ ಗತಿ ಏನು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 750 ವಿದ್ಯಾರ್ಥಿಗಳಿದ್ದಾರೆ. ಎಲ್ಲ ವಿಷಯಗಳಿಗೆ 56 ಉಪನ್ಯಾಸಕರು ಬೇಕು. ಆದರೆ ಕೇವಲ 7-8 ಉಪನ್ಯಾಸಕರು ಇಲ್ಲಿದ್ದಾರೆ. ಇಂಗ್ಲಿಷ್, ಭೌತಶಾಸ್ತ್ರ, ಸಮಾಜವಿಜ್ಞಾನ ವಿಷಯಕ್ಕೆ ಉಪನ್ಯಾಸಕರೇ ಇಲ್ಲ. ಬಸ್ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಉಳಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಇವೆಲ್ಲವನ್ನೂ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು. ವಿದ್ಯಾರ್ಥಿ ಮುಖಂಡರಾದ ಪ್ರಸನ್ನ ಬಂಗಾರಿ, ಪವನ ತೋಟಗೇರ, ಕಾರ್ತಿಕ ಶಡಗರವಳ್ಳಿ, ವಿಶ್ವನಾಥ ನೀಲಪ್ಪನವರ, ಸಂಜು ದಿಡಗೂರ, ಚಾಂದ್‌ಸಾಬ ಸುಲೇಮಾನನವರ, ಪರಶುರಾಮ ಆರೇರ, ಸಂದೀಪ ರಾಯಪ್ಪನವರ, ಭರತ್, ಮಣಿಕಂಠ ಗುಡಿಯವರ, ರಾಕೇಶ ನಾಯ್ಕ, ಭೂಮಿಕಾ ಎಚ್, ಮಧುರಶ್ಮೀ, ಆಂಕರ ಸುಣಗಾರ, ರವಿ ನೆಗಳೂರ, ವೀರೇಂದ್ರ ಎಸ್., ಶಿವು ಆಲದಕಟ್ಟಿ ಹಾಗೂ ಬಿಜೆಪಿ ಮುಖಂಡರಾದ ಸಿದ್ದಲಿಂಗಪ್ಪ ಕಮಡೊಳ್ಳಿ, ರಾಮು ಯಳ್ಳುರ, ಬಸವರಾಜ ಹಾದಿಮನಿ, ಪರಶುರಾಮ ಬಾರ್ಕಿ, ಶಂಭು ಚಲ್ಲಾಳ, ಜಯಲಿಂಗಪ್ಪ ಹಳಕೊಪ್ಪ, ಜಗದೀಶ ಸಿಂಧೂರ, ಅಮಿತ ಶಡಗರವಳ್ಳಿ, ಗಜೇಂದ್ರ ಕುಂದಾಪೂರ, ಮಹೇಶ ಹಿರೇಮಠ, ನಾಗೇಂದ್ರ ಚಿಕ್ಕಣ್ಣನವರ ಮೊದಲಾದವರು ಈ ಸಂದರ್ಭದಲ್ಲಿದ್ದರು.ಪಾದಯಾತ್ರೆ:ಹಾನಗಲ್ಲ ಹೊರ ವಲಯದ ಮಲ್ಲಿಗಾರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪಟ್ಟಣದ ಮಹಾತ್ಮಗಾಂಧಿ ವೃತ್ತದವರೆಗೆ 3 ಕಿಮೀ ದೂರ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.