ಅಪಘಾತವೆಸಗಿದ ಹೋಂಡಾ ಆ್ಯಕ್ಟಿವ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೋಹಿತ್ ಗೌಡ ಹಾಗೂ ಸವಾರ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಸಂಚಾರಿ ನಿಯಮ ಉಲ್ಲಂಘಿಸಿ (ತ್ರಿಬಲ್ ರೈಡಿಂಗ್) ಪ್ರಯಾಣಿಸುತ್ತಿದ್ದ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಎರಡು ಬೈಕ್ ಗಳ ಸವಾರರಿಬ್ಬರೂ ಸೇರಿದಂತೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಸಂಜಯ ಚಿತ್ರಮಂದಿರದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಗುರುವಾರ ರಾತ್ರಿ ಜರುಗಿದೆ. ತಾಲೂಕಿನ ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯ ಮುಟ್ಟನಹಳ್ಳಿ ಮುತ್ತುರಾಜು ಪುತ್ರ ಕೀರ್ತಿ (18) ಮೃತಪಟ್ಟ ಹಿಂಬದಿ ಸವಾರ. ಈತನ ಜೊತೆ ಬೈಕ್ ಚಾಲನೆ ಮಾಡುತ್ತಿದ್ದ ಕೆ.ಎಂ.ದೊಡ್ಡಿಯ ಭರತ್ (19), ಮನೋಜ್ (19) ಹಾಗೂ ಅಪಘಾತವೆಸಗಿದ ಹೋಂಡಾ ಆ್ಯಕ್ಟಿವ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೋಹಿತ್ ಗೌಡ ಹಾಗೂ ಸವಾರ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಸಂಜೀವಿನಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕೀರ್ತಿ ಮದುವೆ ಮತ್ತಿತರ ಸಮಾರಂಭಗಳಲ್ಲಿ ಊಟ ಬಡಿಸುವ ಕೆಲಸ ಮಾಡುತ್ತಿದ್ದನು. ತನ್ನ ಸ್ನೇಹಿತರಾದ ಭರತ್ ಹಾಗೂ ಮನೋಜ್ ಅವರೊಂದಿಗೆ ರಾತ್ರಿ 8:30ರ ಸಮಯದಲ್ಲಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಚಿತ್ರಮಂದಿರದ ಬಳಿ ಚಾಲನೆ ಮಾಡುತ್ತಿದ್ದ ನವೀನ, ಮೋಹಿತ್ ಗೌಡ ಹಾಗೂ ಮತ್ತೋರ್ವ ಪ್ರಯಾಣಿಸುತ್ತಿದ್ದ ಹೋಂಡಾ ಆ್ಯಕ್ಟಿವ್ ಸ್ಕೂಟರ್ ಬೈಕ್ ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.ಸ್ಕೂಟರ್ ನಲ್ಲಿದ್ದ ಮತ್ತೋರ್ವ ಅಪಘಾತ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ಕಾಮಾಕ್ಷಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.