ಬೋಟ್ ಗಳ ನಡುವೆ ಡಿಕ್ಕಿ: ಇಬ್ಬರಿಗೆ ಗಾಯ

| Published : May 24 2024, 12:59 AM IST

ಸಾರಾಂಶ

ತನ್ಮಡಗಿಯ ವಾಮನ ಅಂಬಿಗ ಮತ್ತು ಅವರ ಪುತ್ರ ಸಮರ್ಥ ಅಂಬಿಗ ಅವರು ಮೀನುಗಾರಿಕೆ ದೋಣಿಯಲ್ಲಿ ಹೋಗುತ್ತಿದ್ದಾಗ ಟೂರಿಸ್ಟ್‌ ಬೋಟ್ ವೇಗವಾಗಿ ಬಂದು ದೋಣಿಗೆ ಡಿಕ್ಕಿ ಹೊಡೆದಿದೆ.

ಹೊನ್ನಾವರ: ತಾಲೂಕಿನ ತನ್ಮಡಗಿ ಬಳಿ ಶರಾವತಿ ನದಿಯಲ್ಲಿ ಬೋಟಿಂಗ್ ಅವಾಂತರದಿಂದ ಮತ್ತೆ ದುರ್ಘಟನೆ ನಡೆದಿದ್ದು, ಮೀನುಗಾರರ ದೋಣಿಗೆ ಟೂರಿಸ್ಟ್‌ ಬೋಟ್ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.ತನ್ಮಡಗಿಯ ವಾಮನ ಅಂಬಿಗ ಮತ್ತು ಅವರ ಪುತ್ರ ಸಮರ್ಥ ಅಂಬಿಗ ಅವರು ಮೀನುಗಾರಿಕೆ ದೋಣಿಯಲ್ಲಿ ಹೋಗುತ್ತಿದ್ದಾಗ ಟೂರಿಸ್ಟ್‌ ಬೋಟ್ ವೇಗವಾಗಿ ಬಂದು ದೋಣಿಗೆ ಡಿಕ್ಕಿ ಹೊಡೆದಿದೆ. ದೋಣಿಯಲ್ಲಿದ್ದ ವಾಮನ ಅಂಬಿಗ ನೀರಿನಲ್ಲಿ ಬಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಬೋಟ್ ಡಿಕ್ಕಿಯಾದ ಪರಿಣಾಮ ಸಮರ್ಥ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರಾವತಿ ನದಿಯಲ್ಲಿ ಟೂರಿಸ್ಟ್ ಬೋಟ್‌ಗಳಿಂದ ಪದೇ ಪದೇ ಅವಘಡಗಳು ಸಂಭವಿಸಿ ಪ್ರವಾಸಿಗರಲ್ಲಿ ಮತ್ತು ಸ್ಥಳಿಯರಲ್ಲಿ ಆತಂಕ ಉಂಟಾಗುತ್ತಿದೆ.

ಈ ಕುರಿತು ಮೀನುಗಾರ ವಾಮನ ಅಂಬಿಗ ಮಾತನಾಡಿ, ಈ ಹಿಂದಿನಿಂದಲೂ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದೇವೆ. ಮಗನಿಗೆ ರಜೆ ಇರುವುದರಿಂದ ಮೀನು ಹಿಡಿಯುವುದನ್ನು ತೋರಿಸಲು ದೋಣಿಯಲ್ಲಿ ಹೋಗಿದ್ದೇವು. ಮೀನುಗಾರಿಕೆ ಮುಗಿಸಿ ಬರುವಾಗ ಹಿಂದಿನಿಂದ ಬೋಟ್ ಬಂದು ಡಿಕ್ಕಿಯಾಗಿದೆ. ಮಗನಿಗೆ ಪೆಟ್ಟಾಗಿದೆ. ಕೈ ಎತ್ತಲು ಆಗುವುದಿಲ್ಲ. ದುಡಿಮೆ ಮಾಡಿ ಜೀವನ ನಡೆಸಲು ಕಷ್ಟವಾಗಿದೆ. ಟೂರಿಸ್ಟ್ ಬೋಟ್ ಹಾವಳಿಗೆ ಕಡಿವಾಣ ಹಾಕಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಅಪರಿಚಿತ ಲಾರಿ ಡಿಕ್ಕಿ: ಬೈಕ್ ಸವಾರ ಸಾವು

ಯಲ್ಲಾಪುರ: ಅಪರಿಚಿತ ಲಾರಿಯೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಪಟ್ಟಣದ ಬಾಳಗಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಯಲ್ಲಾಪುರ ಪಟ್ಟಣದ ಸಬಗೇರಿಯ ನಾರಾಯಣಪುರದ ರಾಘು ದಿನೇಶ ಮಿರಾಶಿ(೨೫) ಮೃತಪಟ್ಟ ಯವಕ. ಭರಣಿಯ ವೆಂಕಟ್ರಮಣ ಗೋಪಾಲ ಸಿದ್ದಿ(೨೩) ಗಾಯಗೊಂಡ ಹಿಂಬದಿ ಸವಾರ. ಇವರಿಬ್ಬರು ಯಲ್ಲಾಫುರ ಕಡೆಯಿಂದ ಲಿಂಗದಬೈಲ್ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಒವರ್‌ಟೇಕ್ ಮಾಡಿದ ಲಾರಿಯ ಚಾಲಕನು ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿಪಡಿಸಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಚಾಲಕ ರಾಘು ದಿನೇಶ ಮಿರಾಶಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಿಂದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೈಕ್‌ನಿಂದ ಬಿದ್ದವರಿಗೆ ಉಪಚರಿಸದೇ, ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ, ವೇಗದಲ್ಲಿ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾನೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಐ ರಮೇಶ ಹನಾಪುರ ಹಾಗೂ ಪಿಎಸ್‌ಐ ಸಿದ್ದಪ್ಪ ಭೇಟಿ ನೀಡಿ, ಪರಿಶೀಲಿಸಿದ್ದಾರೆ.