ಕನ್ನಡಪ್ರಭ ದೇವರಹಿಪ್ಪರಗಿ
ರಸ್ತೆ ಮೇಲೆ ನಿಂತ ಟ್ರ್ಯಾಕ್ಟರ್ ಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಯಲಗೋಡ ಗ್ರಾಮದ ಸಮೀಪವಿರುವ ಹಡಗಿನಾಳ ಕ್ರಾಸ್ ಹತ್ತಿರ ಭಾನುವಾರ ಸಂಭವಿಸಿದೆ.ಕಲಕೇರಿ ತಾಂಡಾದ ಥಾವರುರ ದೀಪು ಚವ್ಹಾಣ (60) ಮೃತ. ಕಲಕೇರಿಯಿಂದ ಗುಬ್ಬೇವಾಡ ಗ್ರಾಮಕ್ಕೆ ಕೆಲಸಕ್ಕೆಂದು 6 ಜನ ಕೂಲಿ ಕಾರ್ಮಿಕರು ಟಂಟಂ ವಾಹನದಲ್ಲಿ ಹೋಗುವಾಗ ರಸ್ತೆ ಬದಿಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಗುದ್ದಿ ಅಪಘಾತ ಸಂಭವಿಸಿದೆ. ಟಂಟಂ ವಾಹನ ಚಾಲಕ ಪರಾರಿಯಾಗಿದ್ದಾನೆ. ಘಟನೆಯಿಂದ ಕೆಲಹೊತ್ತು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಪಿಎಸ್ಐ ಸುರೇಶ ಮಂಟೂರ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವಾಹನ ಸವಾರರಿಗೆ ಅನುವು ಮಾಡಿಕೊಟ್ಟರು. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ, ಪ್ರಕರಣ ದಾಖಲಾಗಿದೆ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯಪುರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ) ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಚರ್ಚಿಸಿದರು.