ಕಾಪು: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ದಾನಿ ರಂಜಿತ್ ಬರ್ಬೋಜಾ ಅವರು ಕೊಡಮಾಡಿದ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ ಗುರುವಾರ ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರಾಮದಾಸ್ ಪ್ರಭು ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಅಭಿಮಾನಿಗಳು ತಮ್ಮ ಗಳಿಕೆಯ ಸ್ವಲ್ಪ ಪಾಲನ್ನು ಶಾಲೆಗೆ, ಸಮಾಜಕ್ಕೆ ನೀಡುವ ಉದಾರ ಮನೋಭಾವನೆಯನ್ನು ಅಭಿನಂದನಾರ್ಹ ಅಲ್ಲದೆ ಇತರರಿಗೂ ಮಾದರಿಯಾಗಿದೆ ಎಂದರು.

ಬಂಟಕಲ್ಲು ಶ್ರೀದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ರಂಜಿತ್ ಪ್ರಕಾಶ್ ಬರ್ಬೋಜಾ ದೂರದ ಇಸ್ರೇಲ್‌ನಲ್ಲಿ ಇದ್ದರೂ, ನಮ್ಮ ಶಾಲಾಭಿಮಾನದಿಂದ ಮಕ್ಕಳಿಗೆ ಹಲವು ವರ್ಷಗಳಿಂದ ಸಮವಸ್ತ್ರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಶಾಲಾ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬರ್ಬೋಜ ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಒಂದರಿಂದ ಏಳನೇ ತರಗತಿಯ 65 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಶಾಲಾ ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ್ ಬಾಂದೇಲ್ಕರ್ ವೇದಿಕೆಯಲ್ಲಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಸ್ವಾಗತಿಸಿದರು. ಶಿಕ್ಷಕಿ ರೇಶ್ಮಾ ವಂದಿಸಿದರು. ಜ್ಞಾನದೀಪ ಶಿಕ್ಷಕಿ ವಿನುತಾ ಆಚಾರ್ಯ ನಿರೂಪಿಸಿದರು. ಶಿಕ್ಷಕಿಯರಾದ ಸುಮತಿ, ಶ್ವೇತಾ ಸಹಕರಿಸಿದರು.