ಸಾರಾಂಶ
ಕನ್ನಡಪ್ರಭ ವಾರ್ತೆ ಬ.ಬಾಗೇವಾಡಿ
ಕೆಎಸ್ಸಾರ್ಟಿಸಿಯ ಎರಡು ಬಸ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮಹಿಳಾ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 40 ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ಶನಿವಾರ ನಡೆದಿದೆ.ವಿಜಯಪುರ ಜಿಲ್ಲೆ ಬಸನವಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ (36), ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (31) ಮೃತ ಮಹಿಳೆಯರು.
ವಿಜಯಪುರದಿಂದ ಸಿಂದಗಿ ಕಡೆಗೆ ಹೊರಟಿದ್ದ ಹಾಗೂ ಕಲಬುರಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್ ಗಳು ಕವಲಗಿ ಗ್ರಾಮದ ಬಳಿ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳು ಸಂಪೂರ್ಣ ನುಜ್ಜುಗಜ್ಜಾಗಿವೆ. ಬಸ್ ಚಾಲಕರಿಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಅಫಘಾತದಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಲವರಿಗೆ ಮಾರ್ಗ ಮಧ್ಯದಲ್ಲಿರುವ ಜೆಎಸ್‌ಎಸ್ ಆಸ್ಪತ್ರೆಗೆ, ಇನ್ನು ಕೆಲವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಚಾರ ಬಂದ್ ಆಗಿ ಹೆದ್ದಾರಿಯ ಎರಡೂ ಬದಿಗೆ 2-3 ಕಿಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ಹಾಗೂ ಕ್ರೇನ್ ಬಳಸಿ ಬಸ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ:
ಕವಲಗಿ ಹತ್ತಿರ ಸಂಭವಿಸಿದ ಸಾರಿಗೆ ಬಸ್‌ಗಳ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ಮಾಡಿ, ಅಗತ್ಯ ಚಿಕಿತ್ಸೆಗೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಗಾಯಾಳುಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ಗಾಯಾಳುಗಳಿಗೆ ಎಕ್ಸರೇ, ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೂ ಅಗತ್ಯ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಮರ್ಪಕ ಚಿಕಿತ್ಸೆಗೆ ಸಚಿವ ಪಾಟೀಲ ಸೂಚನೆ:ಬಸ್‌ಗಳ ಅಪಘಾತಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾಹಿತಿ ಪಡೆದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.